ಬೀದರ್: ದೇಶದಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಪ್ರಧಾನಿ ಮೋದಿ ಪ್ರಚಾರ ಪಡೆಯುತ್ತಿದ್ದಾರೆ. ಮೋದಿ ಹುಟ್ಟುವ ಮೊದಲೇ ನೆಹರು, ಇಂದಿರಾ ಗಾಂಧಿ ಅಂತಹ ಕಾಂಗ್ರೆಸ್ ನಾಯಕರು ರಾಷ್ಟ್ರಾಭಿವೃಗೆ ಕೆಲಸ ಮಾಡಿದ್ದಾರೆ. ಆದರೆ, ಪ್ರಧಾನಿ ಮಾತ್ರ ಅಂತಹ ನಾಯಕರು ಮತ್ತು ಕಾಂಗ್ರೆಸ್ ಪಕ್ಷವನ್ನು ನಿಂದಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಂ 371 (ಜೆ) ದಶಮಾನೋತ್ಸವ ಮತ್ತು ನಾಗರಿಕ ಸಮ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ಶಾಲೆ, ವಿಶ್ವವಿದ್ಯಾಲಯಗಳಲ್ಲಿ ಓದಿಯೇ ಇಂದು ಮೋದಿ ಪ್ರಧಾನಿ ಆಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ದೇಶದಲ್ಲಿ ಏಮ್ಸ್ ಕಾಲೇಜುಗಳು, ದೊಡ್ಡ ಕೈಗಾರಿಕೆಗಳು, ನರೇಗಾ, ಆಹಾರ ಭದ್ರತೆ ಸೇರಿ ಕಾಂತ್ರಿಕಾರಿ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ಆದರೂ ಬಿಜೆಪಿ ರಾಷ್ಟ್ರಕ್ಕೆ ಕಾಂಗ್ರೆಸ್‌ನ ಕೊಡುಗೆ ಏನು ಎಂದು ಪ್ರಶ್ನಿಸುತ್ತದೆ. ನಮ್ಮ ಪಕ್ಷ ಅನುಷ್ಠಾನಗೊಳಿಸಿದ ಯೋಜನೆಗಳನ್ನು ನಾವು ತಂದದ್ದು ಎಂದು ಬಿಜೆಪಿ ತಮ್ಮ ಲೇಬಲ್ ಹಚ್ಚಿಕೊಳ್ಳುತ್ತಿದೆ. ಜನರಿಗೆ ಕೊಟ್ಟ ಒಂದು ಭರವಸೆಗಳನ್ನು ಈಡೇರಿಸಿಲ್ಲ. ಬದಲಾಗಿ ಯುಪಿಎ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕೈಬಿಟ್ಟು ಜನರಿಗೆ ಅನ್ಯಾಯ ಮಾಡಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವ ಇಲ್ಲ, ಜೀರೋ ಎಂದು ಹೇಳುವ ಮೋದಿ ಮತ್ತು ಬಿಜೆಪಿ ಪಕ್ಷ ನಮ್ಮ ಹಿಂದೆಯೇ ಬಿದ್ದಿದೆ. ಕಾಂಗ್ರೆಸ್ಸಿಗೆ ದೊಡ್ಡ ಶಕ್ತಿ ಇದೆ, ಅದಕ್ಕೆ ಹೆದರಿ ನಮ್ಮ ಬೆನ್ನಿಗೆ ಬಿದ್ದಿದೆ ಎಂದು ಲೇವಡಿ ಮಾಡಿದ ಡಾ. ಖರ್ಗೆ, ಬಿಜೆಪಿಗೆ ಮನುವಾದಿ ಜಾರಿ ಮಾಡುವ ಇಚ್ಛೆ ಇದೆ. ಆದರೆ, ಕಾಂಗ್ರೆಸ್‌ಗೆ ಅದನ್ನು ತಡೆಯುವ ಮತ್ತು ಬಸವ- ಅಂಬೇಡ್ಕರರ ತತ್ವಗಳು ಜಾರಿಯಾಗಬೇಕೆಂಬುದು ನಮ್ಮಿಚ್ಛೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮತ್ತು ದಲಿತ, ಕನ್ನಡಪರ ಮತ್ತು ಬಸವಪರ ಸಂಘಟನೆಗಳಿಂದ ಡಾ. ಖರ್ಗೆಯವನ್ನು ಅಭಿನಂದಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ, ಶಾಸಕ ಬಿಆರ್ ಪಾಟೀಲ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಸಿದ್ಧರಾಮ ಶರಣರು ಬೆಲ್ದಾಳ್, ಶ್ರೀ ವರಜ್ಯೋತಿ ಭಂತೆ, ಶ್ರೀ ನೆಲ್ಸನ್ ಸುಮಿತ್ರ್, ಮೌಲಾನಾ ಮೌನಿಸ್ ಕಿರ್ಮಾನಿ, ದಲಿತ ಸಂಘಟನೆಗಳ ಒಕ್ಕುಟದ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ, ಎಂಎಲ್‌ಸಿಗಳಾದ ಅರವಿಂದ ಅರಳಿ, ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಮಾಜಿ ಶಾಸಕ ಅಶೋಕ ಖೇಣಿ, ವಿಜಯಸಿಂಗ್, ಕೆ. ಪುಂಡಲಿಕರಾವ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ನಗರಸಭೆ ಅಧ್ಯಕ್ಷ ಎಂ.ಡಿ ಗೌಸ್, ಪ್ರಮುಖರಾದ ಡಾ. ಭೀಮಸೇನರಾವ್ ಶಿಂಧೆ, ಅಮೃತರಾವ್ ಚಿಮಕೋಡೆ, ಮಾಲಾ ನಾರಾಯಣರಾವ್, ಸಾಗರ ಖಂಡ್ರೆ ಮತ್ತು ಅಭಿಷೇಕ ಪಾಟೀಲ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರಾಜ್ಯ ಸರ್ಕಾರ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ…: ಸಿ.ಟಿ.ರವಿ ಆಕ್ರೋಶ