Advertisement

ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರ ಅಗತ್ಯ: Kharge

08:44 PM Apr 16, 2023 | Team Udayavani |

ಕೋಲಾರ: ಸ್ವಾತಂತ್ರ ಹೋರಾಟದಿಂದ ಗಳಿಸಿದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಒಗ್ಗಟ್ಟಾಗಿ ರಾಹುಲ್‌ಗಾಂಧಿ ನಾಯಕತ್ವದಲ್ಲಿ ಸಾಗಬೇಕಾಗಿದೆ, ರಾಹುಲ್‌ ಗಾಂಧಿ ಧೈರ್ಯದಿಂದ ಮಾತನಾಡುವ ವ್ಯಕ್ತಿಯಾಗಿದ್ದಾರೆ, ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಪ್ರತಿಪಾದಿಸಿದರು.

Advertisement

ನಗರದ ಹೊರವಲಯದಲ್ಲಿ ಜರುಗಿದ “ಜೈ ಭಾರತ್‌ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಜನಪರ ಯೋಜನೆಗಳು ಮತ್ತೆ ಆರಂಭವಾಗಬೇಕು, ಯಾರೇ ಮುಖ್ಯಮಂತ್ರಿಯಾಗಲಿ ತಮಗೆ ಬೇಕಾಗಿಲ್ಲ, ಕಾಂಗ್ರೆಸ್‌ ಪಕ್ಷಕ್ಕೆ 150 ಸೀಟುಗಳನ್ನು ಕೊಡಬೇಕು, ಡಬಲ್‌ ಇಂಜಿನ್‌ ಸರಕಾರ ತೆಗೆಯಬೇಕು ಎಂದು ಮನವಿ ಮಾಡಿದರು.

ಜನ ಮೋದಿ ಸರಕಾರದ ಮೇಲೆ ಬೇಸತ್ತಿದ್ದಾರೆ, 40 ಪರ್ಸೆಂಟ್‌ ರಾಜ್ಯ ಬಿಜೆಪಿ ಸರಕಾರದ ಮೇಲೆ ಬೇಸತ್ತು ಕಾಂಗ್ರೆಸ್‌ ಸೇರುತ್ತಿದ್ದಾರೆ, ಭ್ರಷ್ಟ ಬಿಜೆಪಿ ಸರಕಾರದ ಬಗ್ಗೆ ಮೋದಿ, ಶಾ ಮಾತನಾಡದೆ ಕಾಂಗ್ರೆಸ್‌ ಬೈಯುತ್ತಾ 9 ವರ್ಷ ಕಳೆದಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಏನೂ ಮಾಡಿಲ್ಲ ಎನ್ನುತ್ತಾರೆ ಮೋದಿ. ಬಂಗಾರದ ಗಣಿಗಳನ್ನು, ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಿ ಕಾಂಗ್ರೆಸ್‌ ಸರಕಾರ ದೇಶಕ್ಕೆ ಲಾಭ ಮಾಡಿಕೊಟ್ಟಿದೆ. ಡಬಲ್‌ ಇಂಜಿನ್‌ ಸರಕಾರ ಕರ್ನಾಟಕಕ್ಕೆ ಏನನ್ನು ಕೊಟ್ಟಿದೆ, ಮೋದಿ ಕಾಲದಲ್ಲಿ ಏನು ಬಂದಿದೆ ಎಂದು ಪ್ರಶ್ನಿಸಿದರು.

ಮೋದಿ ಅವರೇ ಹೇಳಿದಂತೆ 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಸಬೇಕಾಗಿತ್ತು, ಆದರೆ, ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ ಯುವಕರಿಗೆ ಉದ್ಯೋಗ ಅವಕಾಶ ಇಲ್ಲದಂತೆ ಮಾಡಿದ್ದಾರೆ, ಇದನ್ನು ಪ್ರಶ್ನಿಸಿದ ಸಂಸತ್ತಿನ ತಮ್ಮ 28 ನಿಮಿಷದ ಭಾಷಣಕ್ಕೆ ಬಿಜೆಪಿ ಗಲಾಟೆ ಮಾಡಿ ಅಡ್ಡಿಪಡಿಸಿತು, ಸದನದಲ್ಲೇ ಇದ್ದ ಮೋದಿ ತಡೆಯಲಿಲ್ಲ.
ದೇಶದ ಒಬ್ಬ ಅದಾನಿಗೆ 2014ರಲ್ಲಿ 50 ಸಾವಿರ ಕೋಟಿ ಇದ್ದ ಆಸ್ತಿ, 2020 ರಲ್ಲಿ ಆಸ್ತಿ 2 ಲಕ್ಷ ಕೋಟಿ ಆಗುತ್ತೆ, 2023 ರಲ್ಲಿ ದಿಢೀರ್‌ ಆಗಿ 12ಲಕ್ಷ ಕೋಟಿ ಆಗುತ್ತೆ, ಇದು ಎಲ್ಲಿಂದ ಬಂತು ಎಂಬ ಪ್ರಶ್ನೆಯನ್ನು ರಾಹುಲ್‌ ಗಾಂಧಿ ಕೇಳಿದ್ದರು, ಇದೇ ಕಾರಣದಿಂದ ಕೋಲಾರದಲ್ಲಿ ಮಾತನಾಡಿದ್ದನ್ನೇ ನೆಪವಾಗಿಟ್ಟುಕೊಂಡು ಕೇವಲ 22 ದಿನಗಳಲ್ಲಿ ತೀರ್ಪು ಬಂದು, ಅನರ್ಹತೆ ಮಾಡಿ ಮನೆ ಖಾಲಿ ಮಾಡಿಸಿದರು. ಇದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು.

Advertisement

ಕೋಲಾರ ಬಂಗಾರದ ಜಿಲ್ಲೆ, ಇಡೀ ದೇಶದಲ್ಲಿ ಮೂರೇ ಮೂರು ಬಂಗಾರದ ಗಣಿಗಳಲ್ಲಿ ಕರ್ನಾಟಕದ ಕೋಲಾರ, ತುಮಕೂರು, ರಾಯಚೂರುಗಳಲ್ಲಿವೆ. ಕೋಲಾರ ಬರಗಾಲಕ್ಕೆ ತುತ್ತಾದ ಜಿಲ್ಲೆ, ನೀರಾವರಿ ಕೃಷಿಗೆ ಪೂರಕವಾಗಿರಲಿಲ್ಲ, ಕಾಂಗ್ರೆಸ್‌ ಸರಕಾರ ಬಂದಮೇಲೆ ವಿಶೇಷವಾಗಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದರಿಂದ ನೂರಾರು ಕೆರೆಗಳು ತುಂಬಿವೆ, ಲಕ್ಷಾಂತರ ಎಕರೆ ನೀರಾವರಿ ಆಗುತ್ತಿದೆ.

ಎಂ.ವಿ.ಕೃಷ್ಣಪ್ಪರ ಕಾಲದಲ್ಲಿ ಹೈನೋದ್ಯಮ, ರೇಷ್ಮೆ ಆರಂಭವಾಯಿತು, ಈಗ ಬಂಗಾರ ಜಿಲ್ಲೆಯಿಂದ ಪ್ರಚಾರ ಆರಂಭಿಸಿರುವುದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಖಚಿತ ಎಂದು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next