ಮಂಗಳೂರು,: ಬಿಜೆಪಿಯವರ ಡಬಲ್ ಎಂಜಿನ್‌ನಲ್ಲಿ ಒಂದು ಎಂಜಿನ್ ಹಳಿ ತಪ್ಪಿದೆ, ಇನ್ನೊಂ ದು ಶೀಘ್ರ ಕೆಟ್ಟು ನಿಲ್ಲುವ ಸ್ಥಿತಿ ಬಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳ ವಾರ ಮಾತನಾಡಿ, ಬಿಜೆಪಿಯವರ ಒಂದು ಎಂಜಿನ್‌ಗೆ 40 ಪರ್ಸೆಂಟ್. ಡಬಲ್ ಎಂಜಿನ್‌ಗೆ 80 ಪರ್ಸೆಂಟಾ ಎಂದು ಲೇವಡಿ ಮಾಡಿದರು.
ಬಿಜೆಪಿಯ 40 ಪರ್ಸೆಂಟ್ ಕಮಿಷನ್ ದಂಧೆ ಬಗ್ಗೆೆ ರಾಜ್ಯದ ಗುತ್ತಿಗೆದಾರರ ಅಸೋಸಿಯೇಶನ್, ಅನುದಾನಿತ ಶಾಲೆ, ಕಾಲೇಜುಗಳು ಕೇಂದ್ರ ಸರಕಾರಕ್ಕೆ, ರಾಷ್ಟ್ರಪತಿ, ರಾಜ್ಯಪಾಲರಿಗೆ ಪತ್ರಬರೆದಿರುವುದೇ ಸಾಕ್ಷಿ, ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಎಲ್ಲ ವರ್ಗದ ಜನ ಪ್ರತಿಭಟನೆ ನಡೆಸುತ್ತಿದ್ದರೆ ಮೋದಿ, ಅಮಿತ್ ಶಾ ಸುಮ್ಮನಿರುವುದು ಯಾಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 25 ಲಕ್ಷ ಹಾಗೂ ದೇಶದಲ್ಲಿ 13 ಕೋಟಿ ಜನ ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ. ರಾಜ್ಯದ ಸರಕಾರಿ ವಲಯದಲ್ಲೇ 2.60 ಲಕ್ಷ ಹುದ್ದೆ ಭರ್ತಿ ಮಾಡಬೇಕಿದ್ದರೂ ಮಾಡಿಲ್ಲ. ಪರಿಶಿಷ್ಟರು, ಹಿಂದುಳಿದ ವರ್ಗದವರಿಗೆ ಹುದ್ದೆಗಳು ಜಾಸ್ತಿ ಹೋಗುತ್ತವೆ. ತಮಗೆ ಬೇಕಾದವರಿಗೆ ಹುದ್ದೆ ನೀಡಲು ಸಾಧ್ಯವಿಲ್ಲ ಎಂದೇ ವಿಳಂಬನೀತಿ ಅನುಸರಿಸಿದ್ದಾರೆ ಎಂದರು.
ಹೋದ ಕಡೆಯೆಲ್ಲಾ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವುದು ಮೋದಿಯವರ ಅಭ್ಯಾಸ. ಎನ್‌ಎಂಪಿಟಿ, ಎನ್‌ಐಟಿಕೆ ಎಲ್ಲವೂ ಕಾಂಗ್ರೆಸ್ ಮಾಡಿದ್ದು. ಬಿಜೆಪಿ ಸರಕಾರ 9 ವರ್ಷಗಳಲ್ಲಿ ಏನು ಮಾಡಿದೆ ಎಂದು ಅವರು ಪ್ರಶ್ನಿಸಿದರು. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಅಭ್ಯರ್ಥಿಗಳಾದ ರಮಾನಾಥ ರೈ, ಯು.ಟಿ. ಖಾದರ್, ಜೆ.ಆರ್. ಲೋಬೊ ಮತ್ತಿತರರಿದ್ದರು.
ಗಳಗಳನೆ ಅತ್ತಿದ್ದರು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಚಾರಕ್ಕೆ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಯಾವ ಸ್ವಾಮಿಗಳಿಗೆ ಎಷ್ಟು ಪ್ರಭಾವ ಇದೆಯೋ ಗೊತ್ತಿಲ್ಲ, ಸನ್ಯಾಸಿಗಳಿಗೆ ರಾಜಕೀಯ ಏಕೆ ಎಂದು ಅವರನ್ನು ಕೇಳಿದಾಗ, ಅವರು ಗಳಗಳನೆ ಅತ್ತಿದ್ದರು ಎಂದು ತಿಳಿಸಿದರು.