ಬೆಂಗಳೂರು: ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಿಎಎ ಬಗ್ಗೆ ಭಾವನಾತ್ಮಕವಾಗಿ ಪ್ರಚೋದಿಸಲು ಅಮಿತ್ ಶಾ ಆ ರೀತಿ ಮಾತನಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಎಎ ವಿರೋಧಿಸುವವರು ದಲಿತರ ವಿರೋಧಿಗಳು’ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಿಎಎ ಬಗ್ಗೆ ಭಾವನಾತ್ಮಕವಾಗಿ ಪ್ರಚೋದಿಸಲು ಅಮಿತ್ ಶಾ ಆ ರೀತಿ ಮಾತನಾಡಿದ್ದಾರೆ. ದಲಿತರು ಐದು ಸಾವಿರ ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದಾರೆ. ಇವರ ಸಿದ್ಧಾಂತ ದಲಿತರ ಬಗ್ಗೆ ಸ್ವಲ್ಪವಾದರೂ ಚಿಂತೆ ಮಾಡಿದ್ದಿದ್ದರೆ, ಇಷ್ಟೊಂದು ಶೋಷಣೆ ಇರುತ್ತಿರಲಿಲ್ಲ. ಸಿಎಎ ಹಿನ್ನೆಲೆಯಲ್ಲಿ ಅಮಿತ್ ಶಾ ದಲಿತರ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ಖರ್ಗೆ ಹೇಳಿದರು.
ಸಿಎಎ ಪರ ಪ್ರಚಾರ ಕೈಗೊಳ್ಳಲು ಅಮಿತ್ ಶಾ ರಾಜ್ಯಕ್ಕೆ ಬಂದಿದ್ದರು. ಅವರಿಗೆ ರಾಜ್ಯದ ಸಮಸ್ಯೆಗಳಿಗಿಂತ ಓಟ್ ಬ್ಯಾಂಕ್ ಉಳಿಸಿಕೊಳ್ಳಲು ಅವರು ಬಂದಿದ್ದರು. ಕಳಸಾ ಬಂಡೂರಿ ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿಲ್ಲ. ನಮ್ಮ ರಾಜ್ಯದ ರೈತರು, ಬಡವರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಅಮಿತ್ ಶಾಗೆ ಕೇಳಬೇಕು ಎಂದು ಖರ್ಗೆ ಆಗ್ರಹಿಸಿದರು.