ರಬಕವಿ-ಬನಹಟ್ಟಿ : ರಾಜ್ಯದಲ್ಲಿ ಸರ್ಕಾರಿ ನೌಕರರ ಮೇಲೆ ಸಾಲು ಸಾಲು ಹಲ್ಲೆಗಳಾಗುತ್ತಿವೆ. ಇದರಿಂದಾಗಿ ಕೆಲವರು ತಮ್ಮ ಪ್ರಾಣವನ್ನೆ ಕಳದುಕೊಂಡರೆ, ಇನ್ನೂ ಕೆಲವು ಅಧಿಕಾರಿಗಳು ಭಯದ ನೆರಳಿನಲ್ಲಿ ಕರ್ತವ್ಯ ಮಾಡಬೇಕಾಗಿದೆ. ಆದ್ದರಿಂದ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾನೂನು ರಚಿಸಬೇಕು ಎಂದು ಬಾಗಲಕೋಟೆ ಗ್ರಾಮ ಲೆಕ್ಕಾಧಿಕಾರಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಖವಟಕೊಪ್ಪ ತಿಳಿಸಿದರು.
ಅವರು ಶನಿವಾರ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದ ಎದಿರು ಕರ್ನಾಟಕ ರಾಜ್ಯ ನೌಕರರ ಸಂಘ, ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ಹುಮನಾಬಾದ ತಹಶೀಲ್ದಾರ್ ಮೇಲೆ ದಲಿತ ಪರ ಸಂಘಟನೆಗಳು ನಡೆಸಿದ ದಾಳಿಯನ್ನು ಖಂಡಿಸಿ ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿಯನ್ನು ಸಲ್ಲಿಸಿದರು.
ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಇವರಿಗೆ ಅಂಗರಕ್ಷಕರನ್ನು ಹಾಗೂ ತಹಶೀಲ್ದಾರ್ ಕಾರ್ಯಾಲಯಕ್ಕೂ ಸೂಕ್ತ ಪೊಲೀಸ್ ಬಂದೊಬಸ್ತಿಯನ್ನು ನೀಡುವತ್ತ ಸರ್ಕಾರ ಗಮನ ನೀಡಬೇಕು ಎಂದು ಮಲ್ಲಿಕಾರ್ಜುನ ಖವಟಕೊಪ್ಪ ತಿಳಿಸಿದರು.
ಇದನ್ನೂ ಓದಿ : ಪುತ್ತೂರು: 4 ಪಾರ್ಕ್‌ಗಳಿಗೆ ಹೊಸ ರೂಪ; ನಗರಾಡಳಿತದ ಯೋಜನೆ
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹನಗಂಡಿ ಮಾತನಾಡಿ, ಇಂಥ ಘಟನೆಗಳು ನಡೆಯುತ್ತಿರುವುದು ಖಂಡನೀಯವಾಗಿದೆ. ಅದಕ್ಕಾಗಿ ಸೂಕ್ತ ಕಾನೂನು ರಚನೆ ಮಾಡುವುದು ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮೂರು ಸಂಘಗಳ ಪದಾಧಿಕಾರಿಗಳಾದ ಗ್ರೇಡ್-೨ ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಪ್ರಕಾಶ ಮಠಪತಿ, ಬಸವರಾಜ ಬಿಜ್ಜರಗಿ, ಎಸ್.ಎಲ್.ಕಾಗಿಯವರ, ಮಲ್ಲಿಕಾರ್ಜುನ ಗಡೆನ್ನವರ, ಪ್ರಕಾಶ ವಂದಾಲ, ಪ್ರಶಾಂತ ಹೊಸಮನಿ, ಚಂದ್ರಶೇಖರ ಹೊಸಮನಿ, ದೀಪಾ ಖವಾಸಿ, ದೀಪಾ ವಾಲಿಕರ, ಸಂಗೀತಾ ಮಿರ್ಜಿ, ಮಲ್ಲು ನಾವಿ, ಅಪ್ಪಾಜಿ ಹೂಗಾರ, ಎಸ್. ಬಿ. ಮೋಮೀನ ಸೇರಿದಂತೆ ಅನೇಕರು ಇದ್ದರು.