ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ನನಗೆ ಅವಕಾಶ ಮಾಡಿಕೊಟ್ಟ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರಿಗೆ ಧನ್ಯವಾದ ತಿಳಿಸುತ್ತೇನೆ. ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ಒಮ್ಮತದಿಂದ ನನ್ನನ್ನ ಆಯ್ಕೆಮಾಡಿದ್ದಾರೆ. ಅವರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಖರ್ಗೆ ಮಾತನಾಡಿದರು.
ಲೋಕಸಭೆಯಲ್ಲಿ ನನ್ನ ಸೇವೆಯನ್ನು ಗುರುತಿಸಿ ನನ್ನನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ರಾಜ್ಯಸಭೆಗೆ ಹೋಗಿ ಕೆಲಸ ಮಾಡಲು ಇದೊಂದು ಒಳ್ಳೇಯ ಅವಕಾಶ ಸಿಕ್ಕಿದೆ ಎಂದರು.
47 ವರ್ಷಗಳ ಚುನಾವಣೆಯಲ್ಲಿ ಗೆದ್ದುಕೊಂಡು ಬರುತ್ತಿದ್ದೆ. ಆದರೆ ಈ ಬಾರಿ ಬಿಜೆಪಿಯವರು, ಬಿಜೆಪಿ ಕೇಂದ್ರ ನಾಯಕರು ವಿಶೇಷ ಆಸಕ್ತಿವಹಿಸಿ ಸೋಲಿಸಿದರು. ಅದು ಈಗ ಮುಗಿದ ಅಧ್ಯಾಯ ಎಂದರು.
ದೇವೇಗೌಡರ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ಅವರು, ದೇವೇಗೌಡರು ಸ್ಪರ್ಧಿಸುವುದು ಅವರ ಪಕ್ಷದ ವಿಚಾರ. ದೇವೇಗೌಡರಿಗೆ ಕಾಂಗ್ರೆಸ್ ಬೆಂಬಲಿಸುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.