ನವದೆಹಲಿ: ಉತ್ತರಪ್ರದೇಶ ಮತ್ತು ಪಂಜಾಬ್‌ನಂತಹ ಪ್ರಮುಖ ರಾಜ್ಯಗಳ ಚುನಾವಣೆ ಹತ್ತಿರದಲ್ಲಿರುವುದರಿಂದ ಕಾಂಗ್ರೆಸ್ ತನ್ನ ಸಂಘಟನಾತ್ಮಕ ಸ್ವರೂಪದಲ್ಲಿ ಭಾರೀ ಬದಲಾವಣೆ ಮಾಡುವ ನಿರೀಕ್ಷೆಯಿದೆ.
ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಯುವ ನಾಯಕ ಸಚಿನ್ ಪೈಲಟ್, ಟಿ.ಎಸ್.ಸಿಂಗ್ ದೇವ್ ಅವರು ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಇಷ್ಟಾದರೂ ಗಾಂಧಿ ಕುಟುಂಬದವರೇ ಪಕ್ಷದ ಅಗ್ರನಾಯಕತ್ವ ಉಳಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:ಎರಡೇ ಮಕ್ಕಳು ಸಾಕು! ಉತ್ತರ ಪ್ರದೇಶದಲ್ಲಿ ಪ್ರಸ್ತಾವಿತ ನೀತಿಯ ಕರಡು ಪ್ರತಿ ಬಿಡುಗಡೆ
ಆದರೆ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ ಸ್ಥಾನ ವಹಿಸುತ್ತಾರಾ, ಪ್ರಿಯಾಂಕಾ ಆ ಪಟ್ಟ ಪಡೆಯುತ್ತಾರಾ ಎನ್ನುವ ಗೊಂದಲ ಉಳಿದೇ ಇದೆ. ಇವೆಲ್ಲವಕ್ಕೂ ಕಾರಣವಾಗಿರುವುದು ಕಳೆದವರ್ಷ ಕಾಂಗ್ರೆಸ್‌ನ ಹಿರಿಯ ನಾಯಕರು ಸೇರಿಕೊಂಡು; ಪಕ್ಷದ ಅಗ್ರ ನಾಯಕತ್ವ ಬದಲಿಸಬೇಕೆಂದು ಸಾರ್ವಜನಿಕವಾಗಿ ಆಗ್ರಹಿಸಿದ್ದು. ಅದು ಜಿ23 ಗುಂಪು ಎಂದೇ ಖ್ಯಾತವಾಗಿತ್ತು.
ಇನ್ನೊಂದು ಕಡೆ ಪಕ್ಷದಲ್ಲಿ ಒಳಜಗಳ ತೀವ್ರವಾಗಿದೆ. ಸಂಘಟನೆ ನೆಲಕಚ್ಚಿದೆ. ಪಂಜಾಬ್‌ನಲ್ಲಿ ನವಜೋತ್ ಸಿಧು-ಅಮರಿಂದರ್ ಸಿಂಗ್, ರಾಜಸ್ಥಾನದಲ್ಲಿ ಅಶೋಕ್ ಗಹಲೋತ್-ಸಚಿನ್ ಪೈಲಟ್ ಬೀದಿಜಗಳ ಈ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ.