Advertisement

ಖರ್ಗೆ, ವಿನಯ್‌, ಅಂಗಡಿ ನಾಮಪತ್ರ

12:25 PM Apr 06, 2019 | mahesh |

ಹುಬ್ಬಳ್ಳಿ: ಎರಡನೇ ಹಂತದ ಚುನಾವಣೆ ಕಣ ರಂಗೇರಿದ್ದು ನಾಮ ಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಮಲ್ಲಿಕಾರ್ಜುನ ಖರ್ಗೆ, ಆನಂದ ಅಸ್ನೋಟಿಕರ್‌, ಸುರೇಶ ಅಂಗಡಿ, ವಿನಯ ಕುಲಕರ್ಣಿ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.

Advertisement

ಕಲಬುರಗಿಯಲ್ಲಿ ಹಾಲಿ ಸಂಸದ, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಬೃಹತ್‌ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬೀದರ್‌ ಲೋಕಸಭೆ ಅಭ್ಯರ್ಥಿ ಈಶ್ವರ ಖಂಡ್ರೆ,
ಶಾಸಕರಾದ ಎಂ.ವೈ. ಪಾಟೀಲ, ಖನೀಜ್‌ ಫಾತೀಮಾ ಸಾಥ್‌
ನೀಡಿದರು. ರಾಜ್ಯ ನಾಯಕರ ಗೈರು ಎದ್ದು ಕಾಣುತ್ತಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳದಲ್ಲಿದ್ದರೂ ಕಲಬುರಗಿಗೆ ಹೋಗದಿರುವುದು ಅನುಮಾನಕ್ಕೆಡೆ ಮಾಡಿ ಕೊಟ್ಟಿದೆ.

ಧಾರವಾಡದಲ್ಲಿ ಕೊನೆ ಗಳಿಗೆಯಲ್ಲಿ ಗುದ್ದಾಡಿ ಟಿಕೆಟ್‌ ಪಡೆದಿರುವ ವಿನಯ ಕುಲಕರ್ಣಿ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದು, ಉಸ್ತುವಾರಿ ಸಚಿವ ಆರ್‌ .ವಿ.ದೇಶಪಾಂಡೆ, ಸಿಎಂ ಸಂಸದೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಒಗ್ಗಟ್ಟು ಪ್ರದರ್ಶಿಸಿದರು.

ಕೆನರಾ ಲೋಕಸಭೆ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ್‌ ಉಮೇದುವಾರಿಕೆ ಸಲ್ಲಿಕೆ ವೇಳೆ ಖುದ್ದು ಸಿಎಂ
ಕುಮಾರಸ್ವಾಮಿ ಹಾಜರಿದ್ದು ಬಲ ನೀಡಿದರು. ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ವಿರುದ್ಧ ವಾಗ್ಧಾಳಿ ನಡೆಸಿ, ಮೈತ್ರಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು. ಬೆಳಗಾವಿಯಲ್ಲಿ ನಾಲ್ಕನೇ ಬಾರಿ ಗೆಲುವಿಗೆ ಹಾಲಿ ಸಂಸದ ಸುರೇಶ ಅಂಗಡಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಸಾಥ್‌ ನೀಡಿದರೆ, ಹಾವೇರಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬೃಹತ್‌ ಮೆರವಣಿಗೆ ನಡೆಸಿ ಮತಯಾಚನೆ ಮಾಡಿದರು. ದಾವಣಗೆರೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮೈತ್ರಿ ಅಭ್ಯರ್ಥಿಯಾಗಿ ಮಂಜಪ್ಪ ನಾಮಪತ್ರಸಲ್ಲಿಸಿದರು.

ಒಂಭತ್ತು ಸಲ ವಿಧಾನಸಭೆಗೆ ಹಾಗೂ ಎರಡು ಸಲ ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವಿನಲ್ಲೇ ಜನರು ತಮ್ಮ ಗೆಲುವು ಕಂಡುಕೊಂಡಿದ್ದಾರೆ. ಜನರ ಗೆಲುವಿನಲ್ಲೇ ನನ್ನ ಗೆಲುವು ಕಂಡುಕೊಂಡಿದ್ದೇನೆ. ಈ ಚುನಾವಣೆಯಲ್ಲಿಯೂ ಜನರೇ ಗೆಲ್ಲುತ್ತಾರೆ ಹಾಗೂ ಗೆಲ್ಲಿಸುತ್ತಾರೆ. ಗಲ್ಲಿಯಿಂದ ಹಿಡಿದು ದಿಲ್ಲಿವರೆಗೂ ಸೋಲಿಸಲು ನಿಂತವರಿಗೆ ನಿರಾಶೆಯಾಗಲಿದೆ.
ಮಲ್ಲಿಕಾರ್ಜುನ ಖರ್ಗೆ, ಸಂಸದರು

Advertisement

ದುಡ್ಡು ಇದ್ದರೆ ಮಾತ್ರ ಚುನಾವಣೆ ಗೆಲ್ಲುತ್ತೇವೆ ಎಂಬುದೆಲ್ಲ ಸುಳ್ಳು. ಚುನಾವಣೆಯಲ್ಲಿ ಎಲ್ಲವೂ ದುಡ್ಡಿನಿಂದ ನಡೆಯಲ್ಲ. ಹಾಗಿದ್ದರೆ ದುಡ್ಡು ಇದ್ದವರೆಲ್ಲಾ ಈ ದೇಶದ ಪ್ರಧಾನಿ ಆಗುತ್ತಿದ್ದರು. ಜನರ ಪ್ರೀತಿ, ಕಾರ್ಯಕರ್ತರ ಹಾರೈಕೆ ಎಲ್ಲವೂ ಬೇಕಾಗುತ್ತದೆ. ಅದು ಈ
ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಲಭಿಸಿದ್ದು, ಗೆಲುವು ನಮ್ಮದೇ.
ವಿನಯ ಕುಲಕರ್ಣಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next