Advertisement

ಖರ್ಗೆ ಹುಟ್ಟೂರು ವರವಟ್ಟಿಯಲ್ಲಿ ಸಂಭ್ರಮ; ಸ್ವಗ್ರಾಮ ಮರೆಯದ ನಾಯಕ

11:55 PM Oct 19, 2022 | Team Udayavani |

ಬೀದರ್‌: ಶತಮಾನದ ಇತಿಹಾಸ ಹೊಂದಿರುವ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಕನ್ನಡಿಗರಾದ ಡಾ| ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿರುವ ಹಿರಿಯ ರಾಜಕೀಯ ಮುತ್ಸದ್ಧಿಯ ಹುಟ್ಟೂರು ಬೀದರ ಜಿಲ್ಲೆ ಎಂಬುದು ವಿಶೇಷ. ಭಾಲ್ಕಿ ತಾಲೂಕಿನ ವರವಟ್ಟಿಯಲ್ಲಿ ಜನಿಸಿದ ಡಾ| ಖರ್ಗೆ ಬಾಲ್ಯದ ಕೆಲವು ವರ್ಷಗಳನ್ನು ಹುಟ್ಟೂರಿನಲ್ಲಿ ಕಳೆದಿದ್ದಾರೆ.

Advertisement

ಅಪ್ಪಟ ಕಾಂಗ್ರೆಸಿಗರಾಗಿ ಗಾಂಧಿ ಕುಟುಂಬದ ಜತೆಗೆ ನಿಕಟ ಸಂಬಂಧ ಹೊಂದಿರುವ ಡಾ| ಖರ್ಗೆ, ಬರೋಬ್ಬರಿ 22 ವರ್ಷಗಳ ಬಳಿಕ ಎಐಸಿಸಿ ಅಧ್ಯಕ್ಷರ ಆಯ್ಕೆಗೆ ನಡೆದಿದ್ದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಶಶಿ ತರೂರ್‌ ಅವರನ್ನು ಮಣಿಸುವ ಮೂಲಕ ಗಾಂಧಿಯೇತರ ವ್ಯಕ್ತಿಯಾಗಿ ಪಕ್ಷದ ನೂತನ ಸಾರಥಿ­ಯಾಗಿದ್ದಾರೆ.

ಗ್ರಾಮದಲ್ಲಿದೆ ಪಾಳು ಬಿದ್ದ ಮನೆ, ಜಮೀನು: ತಂದೆ ಮಾಪಣ್ಣ ಖರ್ಗೆ ಮತ್ತು ತಾಯಿ ಸೈಬವ್ವಾ ಪುತ್ರರಾಗಿರುವ ಡಾ| ಮಲ್ಲಿಕಾರ್ಜುನ ಖರ್ಗೆ 1942, ಜು.21ರಂದು ವರವಟ್ಟಿ ಗ್ರಾಮದಲ್ಲಿ ಜನಿಸಿದ್ದಾರೆ. ಬಾಲ್ಯದ ದಿನಗಳನ್ನು ಕಳೆದ ಮನೆ ಇಂದಿಗೂ ಸಾಕ್ಷಿಯಾಗಿದ್ದು, ಸಂಪೂರ್ಣ ನೆಲಸಮವಾಗಿದೆ. ಕುಟುಂಬದ ಆಪ್ತರ ಪ್ರಕಾರ ಗ್ರಾಮದಲ್ಲಿ ಅವರ ಹೆಸರಿನಲ್ಲಿ ಐದು ಎಕ್ರೆ ಭೂಮಿ ಸಹ ಇದೆ.

ಮಾಪಣ್ಣ ಖರ್ಗೆ ಸಹಿತ ಒಟ್ಟು ಮೂರು ಜನ ಸಹೋ ದರರು. ಅವರ ಪತ್ನಿ ಮತ್ತು ಮಗಳು ಅತೀ ಚಿಕ್ಕ ವಯಸ್ಸಿ ನಲ್ಲೇ ಅಸುನೀಗಿದ್ದರು. ಕಿತ್ತು ತಿನ್ನುವ ಬಡತನ, ಅದೇ ಸಮಯದಲ್ಲಿ ಈ ಭಾಗದಲ್ಲಿ ರಜಾಕಾರರ ಅಟ್ಟಹಾಸ ಹೆಚ್ಚಿದ್ದರಿಂದ ಮಾಪಣ್ಣ ಅವರು, ಓದಿನ ಆಕಾಂಕ್ಷೆ ಮತ್ತು ತನ್ನ ಪುತ್ರನನ್ನು ದೊಡ್ಡ ಸಾಹೇಬ್‌ನನ್ನಾಗಿ ಮಾಡಬೇಕೆಂಬ ಆಸೆಯಿಂದ ಈ ಹಿಂದೆ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಕಲುºರ್ಗಿಯ ಎಂಎಸ್‌ಕೆ ಜವಳಿ ಮಿಲ್‌ನಲ್ಲಿ ಕಾರ್ಮಿಕರಾಗಿ ಸೇರುತ್ತಾರೆ. ಮಗನಿಗೆ ಅಲ್ಲಿಯ ಎನ್‌ವಿ ಸ್ಕೂಲ್‌ನಲ್ಲಿ ದಾಖಲು ಮಾಡುತ್ತಾರೆ. ಇಡೀ ಬದುಕನ್ನು ಗಂಧದ ಕೊರಡಿನಂತೆ ತೇಯ್ದು ಮಗನ ಭವಿಷ್ಯವನ್ನು ರೂಪಿಸಿರುವುದು ಈಗ ಇತಿಹಾಸ.

ಡಾ| ಖರ್ಗೆಯವರ ಬಡವರು ಮತ್ತು ಹಿಂದುಳಿದವರ ಮೇಲಿನ ಪ್ರೀತಿ, ನಿಷ್ಕಳಂಕ ಕಾಳಜಿಯ ಹಿಂದೆ ಅವರ ತಂದೆಯವರ ಪ್ರಭಾವ ಗಾಢವಾಗಿದೆ. ಗುರಮಿಟ್ಕಲ್‌ ಕ್ಷೇತ್ರದಿಂದ ಶಾಸಕರಾಗಿ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ಅವರು ತಮ್ಮ 46 ವರ್ಷಗಳ ಸು ದೀರ್ಘ‌ ರಾಜಕಾರಣದಲ್ಲಿ ನಾಲ್ಕು ದಶಕಗಳ ಕಾಲ ರಾಜ್ಯ ಹಾಗೂ ಕೇಂದ್ರದ ಸಚಿವ ಸಂಪುಟದಲ್ಲಿ ಸಚಿವರಾಗಿ ರಾಜಕಾರಣದ ಮೌಲ್ಯ ಮತ್ತು ಘನತೆಯನ್ನು ಗಟ್ಟಿಗೊಳಿಸಿದ್ದಾರೆ.

Advertisement

ಹುಟ್ಟೂರಿಗೆ ಸಾಕಷ್ಟು ಕೊಡುಗೆ: ರಾಷ್ಟ್ರದಲ್ಲೇ ಪ್ರಭಾವಿ ನಾಯಕರಾಗಿ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹುಟ್ಟೂರು ವರವಟ್ಟಿ ಗ್ರಾಮದ ಮೇಲಿನ ಪ್ರೀತಿ ಮತ್ತು ಕಾಳಜಿ ಮರೆತಿಲ್ಲ. ಆಗಾಗ ಗ್ರಾಮಕ್ಕೆ ಭೇಟಿ ಕೊಟ್ಟು ತಮ್ಮ ಆಪ್ತರನ್ನು ಭೇಟಿಯಾಗಿ ಬಾಲ್ಯದ ದಿನಗಳನ್ನು ಸ್ಮರಿಸುತ್ತಾರೆ. ಇನ್ನೂ ಕುಗ್ರಾಮವಾಗಿದ್ದ ವರವಟ್ಟಿಗೆ ಅ ಧಿಕಾರದಲ್ಲಿ ಇದ್ದಾಗಲೆಲ್ಲ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸರಕಾರಿ ಆಸ್ಪತ್ರೆ, ಪಶು ಆಸ್ಪತ್ರೆ, ಪ್ರೌಢ ಶಾಲೆ, ವಸತಿ ಯೋಜನೆಯಡಿ ಮನೆಗಳ ಮಂಜೂರಾತಿ ಹೀಗೆ ಅನೇಕ ಅಭಿವೃದ್ಧಿ ಕೆಲಸಗಳ ಮೂಲಕ ಗ್ರಾಮಸ್ಥರಿಗೆ ನೆರವಾಗಿದ್ದಾರೆ. ಈಗ ಗ್ರಾಮದ ವ್ಯಕ್ತಿಯೊಬ್ಬರು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಗದ್ದುಗೆ ಏರಿರುವುದರಿಂದ ವರವಟ್ಟಿಯಲ್ಲಿ ಸಂಭ್ರಮ ಮನೆ ಮಾಡಿದೆ.

ಖರ್ಗೆ ಕುರಿತ ವಿಶೇಷ ಸಂಗತಿಗಳು
ಖರ್ಗೆ ಅವರಿಗೆ ಕನ್ನಡ, ಹಿಂದಿ,ಮರಾಠಿ, ಇಂಗ್ಲಿಷ್‌ ಉರ್ದುಭಾಷೆ ಗೊತ್ತು.
ಬೌದ್ಧ ಧರ್ಮ ಪಾಲನೆ, ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಕಟ್ಟಾ ಅನುಯಾಯಿ.
ಕಬಡ್ಡಿ ಮತ್ತು ಹಾಕಿಯಲ್ಲಿ ಇವರು ರಾಜ್ಯ ಮಟ್ಟದ ಆಟಗಾರರು.
27ನೇ ವಯಸ್ಸಿನಲ್ಲೇ ಕಾಂಗ್ರೆಸ್‌ ನಗರ ಸಮಿತಿಯ ಅಧ್ಯಕ್ಷರಾದವರು.
1972ರಿಂದ 2008ರ ವರೆಗೆ ವಿಧಾನಸಭೆ, 2009 ಮತ್ತು 2014ರಲ್ಲಿ ಲೋಕಸಭೆ ಚುನಾವಣೆ ಗೆಲುವು
ಮನೆಯಲ್ಲಿ ಖರ್ಗೆ ಅವರು ಶಿಸ್ತಿನ ಸಿಪಾಯಿ. ಆಹಾರ, ನೀರು, ವಿದ್ಯುತ್‌ ವೇಸ್ಟ್‌ ಮಾಡಿದರೆ ಸಿಟ್ಟು.

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next