Advertisement

ಮಳೆಗಾಗಿ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆ

05:20 PM Apr 12, 2017 | |

ಶನಿವಾರಸಂತೆ: ಸೋಮವಾರಪೇಟೆ ತಾಲೂಕಿನ ಮಾಲಂಬಿ ಗ್ರಾಮದಲ್ಲಿರುವ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿದರೆ ಮಳೆಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಅದರಂತೆ ಸೋಮವಾರ ಶನಿವಾರಸಂತೆ ಪಟ್ಟಣದ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಯಿತು. 

Advertisement

ಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ಸಮುದ್ರ ಮಟ್ಟದಿಂದ 5,778 ಅಡಿ ಎತ್ತರದಲ್ಲಿರುವ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟವನ್ನೇರಿದ ಪಾದಯಾತ್ರಿಗಳು ಬೆಟ್ಟದ ಮೇಲಿರುವ ಶ್ರೀ ಮಳೆಮಲ್ಲೇಶ್ವರ ದೇವಾಲಯದಲ್ಲಿ ಮಳೆಮಲ್ಲೇಶ್ವರನಿಗೆ ವಿಶೇಷ ಪೂಜಾ ವಿಧಿ ವಿಧಾನವನ್ನು ಸಲ್ಲಿಸಿದರು. 

ಮಳೆಯ ಬರುವಿಕೆಗೆ ಈ ಬೆಟ್ಟವನ್ನೇರಿದರೆ ಮಳೆಯಾಗುತ್ತದೆ ಎಂಬುವುದು ಈ ಭಾಗದ ಜನರ ಪ್ರತೀತಿ. ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟಕ್ಕೆ ಸುಮಾರು 350 ವರ್ಷಗಳ ಇತಿಹಾಸ ಇದ್ದು ಬೆಟ್ಟ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಶನಿವಾರಸಂತೆ ಪಾದಯಾತ್ರೆ ಸಮಿತಿಯಿಂದ ಸೋಮವಾರ ಬೆಳಗ್ಗೆ ಮಾಲಂಬಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಪಯಣ ಬೆಳೆಸಿತು. 3ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮ ಇದಾಗಿದ್ದು ಸೋಮವಾರ ಬೆಳಗ್ಗೆ 8-30 ಕ್ಕೆ ಪಾದಯಾತ್ರೆ ಸಮಿತಿ ಪ್ರಮುಖ ಎ.ಡಿ. ಮೋಹನ್‌ಕುಮಾರ್‌ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ 50 ಕ್ಕಿಂತ ಹೆಚ್ಚಿನ ಪಾದಯಾತ್ರಿಗಳ ತಂಡ, ಪಟ್ಟಣದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿದ ಬಳಿಕ ವಾದ್ಯಗೋಷ್ಠಿಯೊಂದಿಗೆ ಪಾದಯಾತ್ರೆ ಹೊರಟಿಸಿದರು. 

ಭಜನೆ ಮೂಲಕ ಪ್ರಾರ್ಥನೆ
ಪಾದಯಾತ್ರಿಗಳು ಗುಡುಗಳಲೆ ಜಂಕ್ಷನ್‌ ಮೂಲಕವಾಗಿ ಗೋಪಾಲಪುರ, ರಾಮನಹಳ್ಳಿ, ನಂದಿಗುಂದ ಮಾರ್ಗವಾಗಿ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಚಾರಣ ಬೆಳೆಸಿದರು. ಮಧ್ಯಾಹ್ನ 1 ಗಂಟೆಗೆ ಬೆಟ್ಟದ ಮೇಲಿರುವ ದೇವಾಲಯವನ್ನು ತಲುಪಿದ ಪಾದಯಾತ್ರಿಗಳು ದೇವಾಲಯದ ಲ್ಲಿರುವ ಶ್ರೀ ಗಣಪತಿಗೆ ವಿಶೇಷ ಪೂಜಾ ಸೇವೆ ಯನ್ನು ಸಲ್ಲಿಸಿದರು. ಬಳಿಕ ಶನಿವಾರಸಂತೆ ಶ್ರೀ ರಾಮಾಂಜನೇಯ ಭಜನೆ ಮಂಡಳಿಯಿಂದ ಮಳೆ ಮಲ್ಲೇಶ್ವರನಿಗೆ ಭಜನೆ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.  

Advertisement

ಈ ಸಂದರ್ಭದಲ್ಲಿ ಶ್ರೀ ಮಳೆಮಲ್ಲೇಶ್ವರನಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಮುಂತಾದ ಪೂಜಾ ವಿಧಿವಿಧಾನವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪಾದಯಾತ್ರಾ ಸಮಿತಿ ಮತ್ತು ದಾನಿಗಳಿಂದ ಪಾದಯಾತ್ರಿಗಳಿಗೆ ಮತ್ತು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮತ್ತು ಅನ್ನದಾನವನ್ನು ಏರ್ಪಡಿಸಲಾಯಿತು. 

ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಉತ್ಸಾಹದಿಂದ ಪಾದಯಾತ್ರೆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿ.ವಿ. ಜಯಪ್ಪ, ಎ.ಕೆ. ರಾಜಶೇಖರ್‌, ಅಶೋಕ್‌ ಮುಂತಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next