ಬಾದಾಮಿ: ಮಲ್ಲಾಪುರ ಎಸ್.ಎಲ್. ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲದ್ದರಿಂದ ಜನರು ಪರ ಗ್ರಾಮಗಳಿಗೆ ತೆರಳಲು ತೊಂದರೆಯಾಗುತ್ತಿದೆ.
ತಾಲೂಕು ಕೇಂದ್ರದಿಂದ 9 ಕಿ.ಮೀ. ದೂರದಲ್ಲಿರುವ ಮಲ್ಲಾಪುರ ಎಸ್.ಎಲ್. ಗ್ರಾಮದಲ್ಲಿ ಸುಮಾರು 380 ಮನೆಗಳಿದ್ದು, 2500 ಜನಸಂಖ್ಯೆ ಹೊಂದಿದೆ. ಈ ಗ್ರಾಮಕ್ಕೆ ರಸ್ತೆ ಇಲ್ಲ. ಹೊಲದಲ್ಲಿಯೇ ಹೋಗಬೇಕು. ಹೊಲದ ಮಾಲೀಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಇಲ್ಲದ್ದರಿಂದ ಸಾರಿಗೆ ಸಂಪರ್ಕ ಇಲ್ಲ. ಈ ಗ್ರಾಮದ ಮಕ್ಕಳು ಶಿಕ್ಷಣ ಪಡೆಯಲು ಕಾಲುದಾರಿಯಲ್ಲಿಯೇ ನಡೆದುಕೊಂಡು ಹೋಗುವಂತಾಗಿದೆ. ಗ್ರಾಮದಲ್ಲಿ ಅನಾರೋಗ್ಯಕ್ಕೀಡಾದರೆ ಆಂಬ್ಯುಲೆನ್ಸ್ ಕೂಡಾ ಬರುವಂತಿಲ್ಲ. ರಾತ್ರಿ ಸಂದರ್ಭದಲ್ಲಿ ಹೆರಿಗೆ ಸಮಸ್ಯೆ ಕಂಡುಬಂದರೆ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ವಿದ್ಯಾರ್ಥಿಗಳು ಹೆಬ್ಬಳ್ಳಿ ಅಥವಾ ಬಾದಾಮಿಗೆ ಶಿಕ್ಷಣ ಪಡೆಯಲು ಹೋಗಬೇಕು. ಆದರೆ, ರಸ್ತೆ ಇಲ್ಲದ ಕಾರಣ ಊರಿನ ವಿದ್ಯಾರ್ಥಿಗಳು ಬೇರೆ ಊರಿಗೆ ಶಿಕ್ಷಣ ಪಡೆಯಲು ಹೋಗಲು ಆಗದೇ ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಸ್ತೆ ಇಲ್ಲದ ಕಾರಣ ವರ್ಗಾವಣೆಯಲ್ಲಿ ಶಿಕ್ಷಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಊರಿಗೆ ಬೀಗತನ ಮಾಡಲು ಹಿಂಜರಿಯುತ್ತಿದ್ದಾರೆ.
ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರಿಗೆ ಶಾಲಾ ಮಕ್ಕರು ಹಾಗೂ ಗ್ರಾಮದ ಪ್ರಮುಖರು ಮನವಿ ಸಲ್ಲಿಸಿದ್ದಾರೆ. ಬಾಗಲಕೋಟೆ ಉಪವಿಭಾಗಾಧಿಕಾರಿ ಎಚ್. ಜಯಾ ಮತ್ತು ತಹಶೀಲ್ದಾರ್ ಸುಹಾಸ ಇಂಗಳೆ ಅವರಿಗೆ ಕೂಡಲೇ ಭೂಮಿ ಸ್ವಾಧೀನ ಪಡೆದುಕೊಳ್ಳಲು ಸೂಚಿಸಿದ್ದಾರೆ.
ಮಲ್ಲಾಪುರ ಎಸ್.ಎಲ್. ಗ್ರಾಮಕ್ಕೆ ರಸ್ತೆಗೆ ಆಗ್ರಹಿಸಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದೇವೆ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
•
ವೀರಯ್ಯ ಮಣ್ಣೂರಮಠ, ಗ್ರಾಮಸ್ಥ.
ಮಲ್ಲಾಪುರ ಎಸ್.ಎಲ್.ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ ಎಂದು ಶಾಲಾ ಮಕ್ಕಳು ಮನವಿ ಸಲ್ಲಿಸಿದ್ದಾರೆ. ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳಿಗೆ ರಸ್ತೆಗೆ ಭೂ ಸ್ವಾಧೀನಪಡಿಸಿಕೊಳ್ಳಲು ಸೂಚಿಸಿದ್ದೇನೆ.
•
ಸಿದ್ದರಾಮಯ್ಯ,
ಮಾಜಿ ಸಿಎಂ, ಬಾದಾಮಿ ಶಾಸಕರು.