ಅಫಜಲಪುರ: ಸರ್ಕಾರ ಶಿಕ್ಷಣ ವ್ಯವಸ್ಥೆ ಬಲವರ್ಧನೆಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಅದರಲ್ಲೂ ಸರ್ಕಾರಿ ಶಾಲೆಗಳ ಉಳಿವಿಗೆ ಮತ್ತು ಬೆಳವಣಿಗೆಗಾಗಿ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ಶಿಕ್ಷಕರ ನಿಷ್ಕಾಳಜಿ, ಜನಪ್ರತಿನಿಧಿಗಳ ಬೇಜವಾಬ್ದಾರಿತನ ಎಲ್ಲವೂ ಒಂದಾದರೆ ಅಲ್ಲಿನ ಶಾಲೆ ಅಧೋಗತಿಗೆ ತಲುಪುವುದು. ಇಂತದ್ದೇ ಪ್ರಸಂಗವೀಗ ಮಲ್ಲಾಬಾದ ಗ್ರಾಮದಲ್ಲಿ ಆಗಿದ್ದು, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಬೇಕಾಗಿದೆ.
ತಾಲೂಕಿನ ಮಲ್ಲಬಾದ ಗ್ರಾಮ ಕಲಬುರಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಈ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೀಗ ಅವಾಂತರಗಳ ಸರಮಾಲೆ ಇದೆ. 1ರಿಂದ 8ನೇ ತರಗತಿ ವರೆಗೆ ಇರುವ ಈ ಶಾಲೆ 1963ರಲ್ಲಿ ಪ್ರಾರಂಭವಾಗಿದೆ. ಆದರೆ ಅಲ್ಲಿಂದ ಇಲ್ಲಿಯ ವರೆಗೆ ಶಾಲೆ ಬಹಳಷ್ಟು ಅಭಿವೃದ್ಧಿ ಆಗಬೇಕಾಗಿತ್ತು. ಸಂಬಂಧಪಟ್ಟವರ ನಿಷ್ಕಾಳಜಿಯಿಂದ ಅಭಿವೃದ್ಧಿ ಆಗಿಲ್ಲ. ಸದ್ಯ 350 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 11 ಕೊಣೆಗಳಿದ್ದು, ಇವುಗಳ ಪೈಕಿ ಒಂಭತ್ತು ಕೋಣೆಗಳನ್ನು ಬಳಕೆ ಮಾಡಲಾಗುತ್ತಿದ್ದು, ಎರಡು ಕೋಣೆಗಳು ಶಿಥಿಲಾವಸ್ಥೆ ತಲುಪಿದ್ದರಿಂದ ಬಂದ್ ಮಾಡಲಾಗಿದೆ.
ಶಿಥಿಲಾವಸ್ಥೆಯಲ್ಲಿದೆ ಓವರ್ ಹೆಡ್ ಟ್ಯಾಂಕ್: ಶಾಲೆ ಆವರಣದಲ್ಲೊಂದು ಹಳೆಯ ನೀರಿನ ಓವರ್ ಹೆಡ್ ಟ್ಯಾಂಕ್ ಇದೆ. ಇದು ಸುಮಾರು ತಿಂಗಳುಗಳಿಂದ ಶಿಥಿಲಾವಸ್ಥೆ ತಲುಪಿದೆ. ಸಂಬಂಧಪಟ್ಟವರು ಇದನ್ನು ನೆಲಕ್ಕುರುಳಿಸಿ ಭಯರಹಿತ ವಾತಾವರಣ ಮೂಡಿಸಬೇಕಿದೆ. ಆದರೆ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಯಾವಾಗ ಟ್ಯಾಂಕ್ ಮುರಿದುಕೊಂಡು ಮೇಲೆ ಬಿಳುತ್ತದೋ ಗೊತ್ತಿಲ್ಲ. ಹೀಗಾಗಿ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು.
•ಮಲ್ಲಿಕಾರ್ಜುನ ಹಿರೇಮಠ