Advertisement

ಮಾಲ್‌, ಅಂಗಡಿ: ದಿನಬಳಕೆ ಸಾಮಗ್ರಿ ಖರೀದಿ ಭರಾಟೆ

12:46 AM Mar 14, 2020 | mahesh |

ಮಂಗಳೂರು/ ಉಡುಪಿ: ರಾಜ್ಯದೆಲ್ಲೆಡೆ ಒಂದು ವಾರದ ಅವಧಿಗೆ ಮಾಲ್‌ಗ‌ಳು, ಚಿತ್ರ ಮಂದಿರಗಳನ್ನು ಮುಚ್ಚುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ಸಂಜೆ ವೇಳೆಗೆ ಜನ ಸಂದಣಿ ಹೆಚ್ಚಿದ್ದು, ಖರೀದಿ ಭರಾಟೆಯೂ ಜೋರಾಗಿತ್ತು.

Advertisement

ಶನಿವಾರದಿಂದ ಒಂದು ವಾರ ಕಾಲ ಮಾಲ್‌ಗ‌ಳು ಮುಚ್ಚಿರುವ ಕಾರಣ ಶುಕ್ರವಾರ ಸಂಜೆ ವೇಳೆಗೆ ದಿನಬಳಕೆಯ ಅಗತ್ಯವನ್ನು ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮಾರುಕಟ್ಟೆಗೆ ಆಗಮಿಸಿದ್ದರು. ಇದರಿಂದಾಗಿ ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಇತ್ತು. ತರಕಾರಿ, ಹಣ್ಣು, ಬೇಳೆ-ಕಾಳುಗಳು, ಅಕ್ಕಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ಮುಂದಾಗಿದ್ದರು.

ಮಂಗಳೂರಿನ ಪ್ರಮುಖ ಮಾಲ್‌ಗ‌ಳಲ್ಲಿ ಕಳೆದ ಕೆಲವು ದಿನಗಳಿಂದ ಜನಸಂದಣಿ ಕಡಿಮೆ ಇದೆ. ಶುಕ್ರವಾರವೂ ಮಾಲ್‌ಗ‌ಳಲ್ಲಿ ಜನ ಕಂಡುಬರದಿದ್ದರೂ ದಿನಬಳಕೆಯ ವಸ್ತುಗಳು ಸಿಗುವ ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರು.

ಹೊಟೇಲ್‌ ವ್ಯಾಪಾರ ಕುಸಿತ
ನಗರದ ಹೊಟೇಲ್‌ಗ‌ಳಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಾರ ಕಡಿಮೆಯಾಗುತ್ತಿದೆ. ಒಂದೆಡೆ ಕೊರೊನಾ ಭೀತಿ ಮತ್ತೂಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವ ಕಾರಣ ಹೊರ ರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ. ಇದರಿಂದಾಗಿ ಹೊಟೇಲ್‌ಗ‌ಳಲ್ಲಿ ಶೇ. 30ರಷ್ಟು ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಮಾಲಕರು.

ಡಿಸಿ ಆದೇಶ
ಮಾಲ್‌ಗ‌ಳನ್ನು ಮುಚ್ಚಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದ ಕಾರಣ ಒಂದು ವಾರ ನಗರದ ಎಲ್ಲ ಮಾಲ್‌ಗ‌ಳನ್ನು ಮುಚ್ಚುವಂತೆ ಡಿಸಿ ಆದೇಶ ಹೊರಡಿಸಿದ್ದಾರೆ.

Advertisement

ದಿನಸಿ ಖರೀದಿಗೆ ಹೆಚ್ಚಿನ ಆಸಕ್ತಿ
ಉಡುಪಿ: ನಗರದ ಪ್ರಮುಖ ಮಾಲ್‌ಗ‌ಳಲ್ಲಿ ಶುಕ್ರವಾರ ಸಂಜೆ ತುಸು ಹೆಚ್ಚು ಮಂದಿ ಭೇಟಿ ನೀಡಿದ ಚಿತ್ರಣ ಕಂಡು ಬಂತು. ವಸ್ತ್ರ, ಸೌಂದರ್ಯ ವಸ್ತು ಮೊದಲಾದ ಖರೀದಿಗಿಂತ ಮುಖ್ಯವಾಗಿ ದಿನನಿತ್ಯದ ಅಗತ್ಯ ದಿನಸಿ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ಜನ ತೊಡಗಿದ್ದು ಕಂಡು ಬಂತು. ಉಳಿದ ಕೆಲ ಮಂದಿ ತಿಂಡಿ ತಿನಿಸು, ತಂಪು ಪಾನೀಯ ಖರೀದಿಯಲ್ಲಿ ತೊಡಗಿಕೊಂಡರೆ, ತರಕಾರಿಗಳನ್ನು ಖರೀದಿಸಲು ಹೆಚ್ಚಿನ ಮಂದಿ ಮುಂದಾದರು. ಬಟ್ಟೆಗಳು, ಇತರ ಸೌಂದರ್ಯ ವಸ್ತುಗಳ ಖರೀದಿ ಕಡಿಮೆ ಆಗಿತ್ತು.

ಮುಂದಿನ ಒಂದು ವಾರ ಖರೀದಿ ಕಷ್ಟವಾಗಲಿದೆ. ಆದ್ದರಿಂದ ಅಗತ್ಯ ವಸ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಬಂದಿದ್ದೇನೆ. ರೋಗದ ನಿಯಂತ್ರಣದ ದೃಷ್ಟಿಯಿಂದ ಸರಕಾರದ ನಿರ್ಧಾರಕ್ಕೆ ಬೆಂಬಲ ಕೊಡುವುದು ನಮ್ಮ ಕರ್ತವ್ಯವಾಗಿದೆ.
– ಭವ್ಯಶ್ರೀ, ಗ್ರಾಹಕರು

ಪ್ರತಿನಿತ್ಯ 2ರಿಂದ 3 ಸಾವಿರ ಮಂದಿ ಭೇಟಿ ನೀಡುತ್ತಾರೆ. ಇಂದು ಬೆಳಗ್ಗೆ ಹೆಚ್ಚಳ ಕಂಡು ಬಂದಿಲ್ಲ. ಸಂಜೆ ಹೊತ್ತು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಉಳಿದಂತೆ ಎಂದಿನಂತೆಯೆ ಜನ ಭೇಟಿ ನೀಡಿದ್ದಾರೆ.
– ಸುನಿಲ್‌, ಖಾಸಗಿ ಮಾಲ್‌ ಸಿಬಂದಿ

Advertisement

Udayavani is now on Telegram. Click here to join our channel and stay updated with the latest news.

Next