ಕನಕಪುರ: ನಗರದ ಸಾರಿಗೆ ಬಸ್ ನಿಲ್ದಾಣದ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಹೈಟೆಕ್ ಮಾಲ್ ನಿರ್ಮಾಣ ಮಾಡಲು ರೂಪಿಸಿದ್ದ ಯೋಜನೆ ಈಡೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವ ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ದಲ್ಲಿ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿ ಹೊಸ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ಹಳೆ ಬಸ್ ನಿಲ್ದಾಣದ ಜಾಗದಲ್ಲಿ ಎಲ್ಲಾ ಸೌಲಭ್ಯಗಳು ಒಳಗೊಂಡ ಹೈಟೆಕ್ ಮಾಲ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಸಾರಿಗೆ ಸಂಸ್ಥೆ ಮತ್ತು ಖಾಸಗಿ ಹೂಡಿಕೆದಾರರ ಸಹಭಾಗಿತ್ವದಲ್ಲಿ ನಾಲ್ಕು ಅಂತಸ್ತಿನ ಮಾಲ್ ನಿರ್ಮಾಣ ಮಾಡಿ ರಸ್ತೆ ಸಾರಿಗೆ ನಿಯಮದಂತೆ ಖಾಸಗಿ ಹೂಡಿಕೆದಾರರು ಸಾರಿಗೆ ಇಲಾಖೆಗೆ ತಿಂಗಳಿಗೆ ಇಂತಿಷ್ಟು ಬಾಡಿಗೆ ನೀಡುವ ಯೋಜನೆ ಇದಾಗಿತ್ತು. ಸಮ್ಮಿಶ್ರ
ಸರ್ಕಾರ ಪತನದಿಂದ ತಡೆ: ಈ ಯೋಜನೆರೂಪುಗೊಂಡ ಹಿನ್ನೆಲೆಯಲ್ಲಿ ಹಳೆ ಬಸ್ ನಿಲ್ದಾಣದ ಬಾಡಿಗೆಗೆ ನೀಡಿದ್ದ ದ್ವಿಚಕ್ರ ವಾಹನದ ನಿಲುಗಡೆ ಜಾಗ, ಹೋಟೆಲ್, ಎಟಿಎಂ, ಮತ್ತು ಅಂಗಡಿ ಮಳಿಗೆಗಳ ವರ್ತಕರನ್ನು ತೆರವು ಗಳಿಸಲಾಗಿತ್ತು. ಈ ಮಧ್ಯೆ ನಡೆದ ರಾಜಕೀಯ ಬೆಳವಣಿಗೆಗಳಿಂದ ಸಮ್ಮಿಶ್ರ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಸಾರಿಗೆ ಬಸ್ ನಿಲ್ದಾಣದ ಹೈಟೆಕ್ ಮಾಲ್ ಯೋಜನೆಗೆ ಹೊಸ ಸರ್ಕಾರದ ಕರಿನೆರಳು ಬಿದ್ದು ಯೋಚನೆ ಮುಂದುವರೆಯುವ ಯಾವುದೇ ಲಕ್ಷಣಗಳು ಇರಲಿಲ್ಲ. ಹಾಗಾಗಿ ಬಸ್ ನಿಲ್ದಾಣದ ಅಂಗಡಿ ಮಳಿಗೆಗಳನ್ನು ಮತ್ತೆ ವರ್ತಕರಿಗೆ ನೀಡಲಾಗಿತ್ತು.
25 ಕೋಟಿ ರೂ. ವೆಚ್ಚದ ಕಾಮಗಾರಿ: ನಗರ ಸಾರಿಗೆ ಭೂಸಾರಿಗೆ ಇಲಾಖೆ ನಿರ್ದೇಶನಾಲಯ ಹಾಗೂ ವಿಶೇಷ ಅಭಿವೃದ್ಧಿ ಯೋಚನೆಯ ಸಹ ಭಾಗಿತ್ವದಲ್ಲಿ ಹೈಟೆಕ್ ಮಾಲ್ ಯೋಜನೆಗೆ ಮರು ಜೀವ ನೀಡಲು ಸಾರಿಗೆ ಇಲಾಖೆ ಮುಂದಾಗಿದ್ದು, 25 ಕೋಟಿ ರೂ. ವೆಚ್ಚದಲ್ಲಿ ಹಳೆ ಬಸ್ ನಿಲ್ದಾಣದ 1 ಎಕರೆ 26 ಗುಂಟೆ ಜಾಗದಲ್ಲಿ ಹೈಟೆಕ್ ಮಾಲ್ ನಿರ್ಮಾಣವಾಗಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಗರ ಸಾರಿಗೆ ಭೂ ಸಾರಿಗೆ ಇಲಾಖೆ ನಿರ್ದೇಶನಾಲಯ ಮತ್ತು ವಿಶೇಷ ಅಭಿವೃದ್ಧಿ ಯೋಜನೆ ಈ ಎರಡು ಇಲಾಖೆಗಳ ಒಪ್ಪಂದದ ನಂತರ ಹಳೆ ಬಸ್ ನಿಲ್ದಾಣವನ್ನು ತೆರವು ಗೊಳಿಸಲು ಇಲಾಖೆ ಯೋಜನೆ ರೂಪಿಸಿದೆ.
ನಾಲ್ಕು ಅಂತಸ್ತಿನ ಮಾಲ್: ಹಳೆ ಬಸ್ ನಿಲ್ದಾಣದ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಕಟ್ಟಡದಲ್ಲಿ ವಾಹನ ನಿಲುಗಡೆ. ಸಾರಿಗೆ ಬಸ್ ನಿಲ್ದಾಣಹಾಗೂ ಮಳಿಗೆಗಳನ್ನು ಒಳಗೊಂಡ ನಾಲ್ಕು ಅಂತಸ್ತಿನ ಹೈಟೆಕ್ ಮಾಲ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಒಟ್ಟಾರೆಯಾಗಿ ತಾಲೂಕಿನ ಜನತೆಗೆ ಎಲ್ಲಾ ಸೌಲಭ್ಯ ಒಳಗೊಂಡ ಹೈಟೆಕ್ ಮಾಲ್ ತಲೆ ಯೆತ್ತಲಿದ್ದು, ತಾಲೂಕಿನ ಜನರ ಕನಸು ನನಸಾಗಲಿದೆ.
ಹಳೆ ಬಸ್ ನಿಲ್ದಾಣದ ಜಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಖಾಸಗಿ ಸಂಸ್ಥೆ ಹೂಡಿಕೆಗೆ ಮುಂದಾಗದ ಕಾರಣ ಕಾಮಗಾರಿಗೆ ತಡವಾಯಿತು. ಈಗ ಸರ್ಕಾರವೇ ಹೂಡಿಕೆಗೆ ಮುಂದಾಗಿದೆ. ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ನಗರ ಸಾರಿಗೆ ಭೂ ಸಾರಿಗೆ ನಿರ್ದೇಶನಾಲಯ ಇಲಾಖೆಗಳ ಒಪ್ಪಂದ ಪೂರ್ಣಗೊಂಡ ನಂತರ ಹಳೆ ಬಸ್ ನಿಲ್ದಾಣದ ಮಳಿಗೆಗಳ ವರ್ತಕರಿಗೆ ನೋಟಿಸ್ ನೀಡಿ ತೆರವು ಗೊಳಿಸಿ ನಂತರ ಕಾಮಗಾರಿ ಕೈಗೊಳ್ಳಲಾಗುವುದು.
-ಸೋಮಶೇಖರ್, ಸಾರಿಗೆ ಇಲಾಖೆ ಜಿಲ್ಲಾ ಎಇಇ