Advertisement
ಐಪಿಎಲ್ ಆರಂಭಕ್ಕೂ ಮುನ್ನ, ತನ್ನೆಲ್ಲ ಆಟಗಾರರು ಸ್ಥಳೀಯ ಏಕದಿನ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವುದನ್ನು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಂಡಳಿ ಕಡ್ಡಾಯಗೊಳಿಸಿತ್ತು. ಹೀಗಾಗಿ ಮಾಲಿಂಗ ಐಪಿಲ್‌ನಲ್ಲಿ ಆಡುವುದು ಅನುಮಾನವಾಗಿತ್ತು. ಅನಂತರ ನಿರ್ಬಂಧವನ್ನು ಸಡಿಲಗೊಳಿಸಿದ ಎಸ್‌ಎಲ್‌ಸಿ, ಮಾಲಿಂಗ ಅವರಿಗೆ ಐಪಿಎಲ್‌ನಲ್ಲಿ ಆಡಲು ವಿನಾಯಿತಿ ನೀಡಿತ್ತು. ಆದರೆ ಮತ್ತೆ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಂಡ ಲಂಕಾ ಮಂಡಳಿ ಮಾಲಿಂಗ ಅವರನ್ನು ತವರಿಗೆ ಮರಳುವಂತೆ ತಿಳಿಸಿತ್ತು. ಹೀಗಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮಾಲಿಂಗ ಆಡುವುದು ಅನುಮಾನವಾಗಿತ್ತು. ಆದರೆ ಈ ಪಂದ್ಯಕ್ಕೆ ಉಳಿದುಕೊಂಡ ಅವರು ಪಂದ್ಯ ಮುಗಿದ ಕೂಡಲೇ ತವರಿನ ಸ್ಥಳೀಯ ಕ್ರಿಕೆಟ್‌ನಲ್ಲಿ ಗಾಲೆ ತಂಡದ ಪರ ಆಡಲು ವಿಮಾನವೇರಿದ್ದಾರೆ.
ಚೆನ್ನೈ ವಿರುದ್ಧ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಾಲಿಂಗ 18ನೇ ಓವರ್ ಎಸೆದಿದ್ದರು. ಆಗಲೇ ಮಧ್ಯರಾತ್ರಿ 12 ಗಂಟೆ ಆಗಿತ್ತು. ಪಂದ್ಯ ಮುಗಿದ ತತ್‌ಕ್ಷಣ ಮುಂಬಯಿಯಲ್ಲಿ ಕೊಲಂಬೊ ವಿಮಾನ ಏರಿದ ಮಾಲಿಂಗ, 150 ನಿಮಿಷದಲ್ಲಿ ಶ್ರೀಲಂಕಾದಲ್ಲಿದ್ದರು. ಅಲ್ಲಿಂದ ಕ್ಯಾಂಡಿ ತಲುಪಲು ಒಂದು ಗಂಟೆ ತಗುಲಿದೆ. ಗುರುವಾರ ಮುಂಜಾನೆ 4 ಗಂಟೆಯ ಹೊತ್ತಿಗೆ ಕ್ಯಾಂಡಿ ತಲುಪಿದ್ದಾರೆ. ಶ್ರೀಲಂಕಾ ಸ್ಥಳೀಯ ಏಕದಿನ ಕೂಟ ಗಾಲೆ-ಕ್ಯಾಂಡಿ ನಡುವಿನ ಪಂದ್ಯದಿಂದ ಆರಂಭವಾಗಲಿದ್ದು, ಮಾಲಿಂಗ ಗಾಲೆ ತಂಡದ ನಾಯಕರಾಗಿದ್ದಾರೆ. ಎಪ್ರಿಲ್ 11ರ ವರೆಗೆ ಈ ಕೂಟ ನಡೆಯಲಿದೆ. ಅನಂತರ ಮಾಲಿಂಗ ಐಪಿಎಲ್‌ನಲ್ಲಿ ಆಡುವವರೇ ಎಂಬುದು ಖಚಿತವಾಗಿಲ್ಲ.