ಕೊಲಂಬೋ: ಬಣ್ಣ ಬಳಿದ ಕೇಶರಾಶಿ, ಸದಾ ನಗುಮುಖ, ಎಸೆದ ಯಾರ್ಕರ್ ಗಳಿಗೆ ಬ್ಯಾಟ್ಸಮನ್ ಗಳು ಕಂಗಾಲು, ಸ್ಟಂಪ್ ಗಳು ಎಗರಿ ಬೀಳುತ್ತಿದ್ದರೆ ಈ ಬೌಲರ್ ಎರಡೂ ಕೈಯಗಲಿಸಿ ಮೈದಾನದಲ್ಲಿ ಓಡುತ್ತಿದ್ದರು. ಶ್ರೀಲಂಕಾ ಎಂಬ ದ್ವೀಪ ರಾಷ್ಟ್ರದ ಅಪ್ರತಿಮ ಪ್ರತಿಭೆ ʼಸೆಪರಮಾಡು ಲಸಿತ್ ಮಾಲಿಂಗʼ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ.
ಶುಕ್ರವಾರ ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ತನ್ನ ಅಂತಿಮ ಏಕದಿನ ಪಂದ್ಯವಾಡಿದ ʼಸ್ಲಿಂಗ ಮಾಲಿಂಗʼ ಹೊಸತೊಂದು ದಾಖಲೆ ಬರೆದಿದ್ದಾರೆ.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮಾಲಿಂಗ, ಮೂರು ವಿಕೆಟ್ ಪಡೆದು ಮಿಂಚಿದರು. ವಿಶೇಷವೆಂದರೆ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲೇ ವಿಕೆಟ್ ಪಡೆದ ಮಾಲಿಂಗ, ಏಕದಿನ ಕ್ರಿಕೆಟ್ ನಲ್ಲಿ ತಾನೆಸೆದ ಅಂತಿಮ ಎಸೆತದಲ್ಲಿ ವಿಕೆಟ್ ಕಿತ್ತು ಸಂಭ್ರಮಿಸಿದರು. ಮುಸ್ತಫಿಜುರ್ ರೆಹಮಾನ್ ವಿಕೆಟ್ ಲಸಿತ್ ಮಾಲಿಂಗ ಪಡೆದ ಅಂತಿಮ ವಿಕೆಟ್ ಅಗಿ ಇತಿಹಾಸದ ಪುಟ ಸೇರಿತು.
ಕುಂಬ್ಳೆ ದಾಖಲೆ ಪತನ
ಮುಸ್ತಫಿಜುರ್ ವಿಕೆಟ್ ನೊಂದಿಗೆ ಮಾಲಿಂಗ ತನ್ನ ವಿಕೆಟ್ ಗಳಿಕೆಯನ್ನು 338ಕ್ಕೆ ಏರಿಸಿಕೊಂಡರು. ಇದರೊಂದಿಗೆ ಭಾರತದ ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಪಟ್ಟಿಯಲ್ಲಿ ಕೆಳಗೆ ತಳ್ಳಲ್ಪಟ್ಟರು. ಅನಿಲ್ ಕುಂಬ್ಳೆ ಏಕದಿನ ಕ್ರಿಕೆಟ್ ನಲ್ಲಿ 337 ವಿಕೆಟ್ ಪಡೆದಿದ್ದರು.