Advertisement

ಮಲಿಕವಾಡ-ದತ್ತವಾಡ ಸೇತುವೆ ಜಲಾವೃತ

02:56 PM Jul 02, 2019 | Suhan S |

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗಡಿ ಭಾಗದ ನದಿಗಳು ಮೈದುಂಬಿ ಹರಿಯುತ್ತಿವೆ. ಕೆಳಹಂತದ ಮೂರು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿವೆ.

Advertisement

ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 24 ಸಾವಿರ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ನದಿಗಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳಗೊಂಡಿವೆ. ದೂಧಗಂಗಾ, ವೇದಗಂಗಾ ನದಿ ಸಂಗಮದ ಬಳಿ ಇರುವ ಕಾರದಗಾ- ಭೋಜ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಜವಾಡಿ-ಕುನ್ನುರ, ದೂಧಗಂಗಾ ನದಿಗೆ ಇರುವ ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತಗೊಂಡಿವೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ ಸೇತುವೆ ಬಳಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಹಾಗೂ ಉಪನದಿಗಳಾದ ವೇದಗಂಗಾ ಮತ್ತು ದೂಧಗಂಗಾ ನದಿಗಳಿಂದ ಹರಿದು ಬರುತ್ತಿರುವ ನೀರಿನಲ್ಲಿ ಅಂತರಗಂಗೆ ಬಳ್ಳಿ ಕಲ್ಲೋಳ ಸೇತುವೆ ಬಳಿ ಬ್ಯಾರೇಜ್‌ಗೆ ತಡೆಹಿಡಿದಿದೆ. ಹೀಗಾಗಿ ನೀರಿನ ಹರಿವಿನಲ್ಲಿ ವೇಗ ಕಡಿಮೆಯಾಗಿದೆ. ಕೆಳಹಂತದ ಬ್ಯಾರೇಜಗಳು ಜಲಾವೃತಗೊಂಡಿರುವುದರಿಂದ ನದಿ ತೀರದ ರೈತರು ಸುತ್ತುವರೆದು ಪ್ರಯಾಣ ಮಾಡುತ್ತಿದ್ದಾರೆ.

ಜಲಾವೃತಗೊಂಡ ಬ್ಯಾರೇಜ್‌ಗಳ ಬಳಿ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್‌ ಇಲಾಖೆ ತಿಳಿಸಿದ್ದು, ಸೇತುವೆಗಳ ಬಳಿ ಬ್ಯಾರೇಕೆಡ್‌ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಕೃಷ್ಣಾ ನದಿಗೆ ಅಂತರಗಂಗೆ ಬಳ್ಳಿ ಹರಿದು ಬಂದು ಕಲ್ಲೋಳ ಬ್ಯಾರೇಜ್‌ ಬಳಿ ನೀರು ತಡೆಹಿಡಿಯುತ್ತಿರುವುದರಿಂದ ಅದನ್ನು ಜೆಸಿಬಿ ಸಹಾಯದಿಂದ ಹೊರತೆಗೆಯುವಂತೆ ಸ್ಥಳೀಯ ಪಿಡಿಒಗೆ ನಿರ್ದೇಶನ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ತಿಳಿಸಿದ್ದಾರೆ.

ಮಹಾರಾಷ್ಟ್ರ ಮಳೆ ವಿವರ: ಕೊಯ್ನಾ 48 ಮಿಮೀ, ನವಜಾ 25 ಮಿಮೀ, ವಾರಣಾ 21 ಮಿಮೀ, ಮಹಾಬಳೇಶ್ವರ 86 ಮಿಮೀ, ರಾಧಾನಗರ 114 ಮಿಮೀ, ಪಾಟಗಾಂವ 189 ಮಿಮೀ ಹಾಗೂ ಕಾಳಮ್ಮವಾಡಿ ಪ್ರದೇಶದಲ್ಲಿ 106 ಮಿಮೀ ಮಳೆಯಾದ ಬಗ್ಗೆ ವರದಿಯಾಗಿದೆ.

Advertisement

ಚಿಕ್ಕೋಡಿ ಮಳೆ ವಿವರ: ಚಿಕ್ಕೋಡಿ 3.4 ಮಿಮೀ, ಸದಲಗಾ 23.5 ಮಿಮೀ, ನಿಪ್ಪಾಣಿ 13 ಮಿಮೀ, ಅಂಕಲಿ 4.6 ಮಿಮೀ, ಗಳತಗಾ 10.2 ಮಿಮೀ, ನಾಗರಮುನ್ನೋಳ್ಳಿ 8.6 ಮಿಮೀ, ಜೋಡಟ್ಟಿ 2.8 ಮಿಮೀ ಹಾಗೂ ಸೌಂದಲಗಾ ಮಳೆ ಮಾಪನ ಕೇಂದ್ರದ ಪರಿಸರದಲ್ಲಿ 8.8 ಮಿಮೀ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next