Advertisement

ಕರಾವಳಿ ಪ್ರತಿಭೆಗಳ ಹೊಸ ಮನ್ವಂತರ “ಮಾಲ್ಗುಡಿ ಡೇಸ್‌’: ವಿಜಯ ರಾಘವೇಂದ್ರ

10:13 AM Jan 19, 2020 | mahesh |

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದು, ಉದಯವಾಣಿ “ಸುದಿನ’ದ ನವೀನ್‌ ಭಟ್‌ ಇಳಂತಿಲ ಅವರಿಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

Advertisement

ಮಹಾನಗರ: ಬಾಲ್ಯದಲ್ಲಿಯೇ “ಚಿನ್ನಾರಿ ಮುತ್ತ ಚಲನಚಿತ್ರದ ಚಿತ್ರ ಮುಖೇನ ಚಂದನವನ ಪ್ರವೇಶಿಸಿದ ವಿಜಯ ರಾಘವೇಂದ್ರ ಅವರು ಕೆಲವು ಸಮಯದಿಂದ ಸಿನೆಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕರಾವಳಿ ಮೂಲದ ನಿರ್ದೇಶಕ ಕಿಶೋರ್‌ ಮೂಡುಬಿದಿರೆ ನಿರ್ದೇಶನದ “ಮಾಲ್ಗುಡಿ ಡೇಸ್‌’ ಕನ್ನಡ ಚಿತ್ರದಲ್ಲಿ 75 ವರ್ಷದ ವೃದ್ಧನ ಪಾತ್ರದಲ್ಲಿ ನಟಿಸಿ ಸಾಕಷ್ಟು ಹವಾ ಎಬ್ಬಿಸಿದ್ದು, ಫೆ. 7ರಂದು ಈ ಚಿತ್ರ ತೆರೆಕಾಣಲಿದೆ.

ಸದ್ಯದಲ್ಲಿಯೇ ತೆರೆ ಕಾಣಲಿರುವ ಮಾಲ್ಗುಡಿ ಡೇಸ್‌ ಚಲನಚಿತ್ರದಲ್ಲಿ ನಿಮ್ಮ ಪಾತ್ರ?
ಈ ಚಿತ್ರದಲ್ಲಿ ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬುದು ನನ್ನ ಪಾತ್ರದ ಹೆಸರು. ಸುಮಾರು 75 ವರ್ಷ ವಯಸ್ಸಿನ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬರಹಗಾರರು ತನ್ನ ಕೊನೆಯ ಹಂತದ ಜೀವನದ ವ್ಯತ್ಯಾಸ ಯಾವ ರೀತಿ ಕಂಡುಕೊಳ್ಳುತ್ತಾರೆ ಎನ್ನುವುದು ಚಿತ್ರದ ಪ್ರಮುಖ ಅಂಶ.

ಮಾಲ್ಗುಡಿ ಡೇಸ್‌ ಚಿತ್ರದಲ್ಲಿ ಕರಾವಳಿಯ ಅಂಶಗಳೇನಾದರೂ ಇದೆಯಾ?
ಮಾಲ್ಗುಡಿ ಡೇಸ್‌ ಚಲನಚಿತ್ರದಲ್ಲಿ ಕರಾವಳಿ ಭಾಗದ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ನಿರ್ದೇಶಕರು ಕೂಡ ಇದೇ ಭಾಗದವರು. ಚಲನಚಿತ್ರ ಹೆಚ್ಚಿನ ಭಾಗವನ್ನು ಮಲೆನಾಡು ಭಾಗದಲ್ಲಿ ಚಿತ್ರೀಕರಣ ನಡೆಸಿದ್ದೇವೆ.

ಈ ಹಿಂದೆ ಪ್ರಸಿದ್ಧಿ ಪಡೆದ ಟೆಲಿಫಿಲ್ಮ್ ಮಾಲ್ಗುಡಿ ಡೇಸ್‌ಗೂ ಈ ಚಲನಚಿತ್ರಕ್ಕೂ ಸಂಬಂಧ ಇದೆಯೇ?
ಮಾಲ್ಗುಡಿ ಡೇಸ್‌ ಟೆಲಿಫಿಲ್ಮ್ಗೂ ಚಲನಚಿತ್ರಕ್ಕೂ ಈ ಟೈಟಲ್‌ ಬಿಟ್ಟು ಬೇರೆ ಯಾವುದೇ ರೀತಿಯ ಹೋಲಿಕೆ, ಸಂಬಂಧವಿಲ್ಲ. ಇದೊಂದು ಕಮರ್ಷಿಯಲ್‌ ಚಲನಚಿತ್ರ. ಈ ಟೈಟಲ್‌ ಮತ್ತು ಚಿತ್ರದ ಕಥೆ ನಿರ್ದೇಶಕರದ್ದು. ಕಥೆಗೆ ಈ ಟೈಟಲ್‌ ಹೊಂದುತ್ತದೆ.

Advertisement

ನಿರ್ದೇಶನ ಮತ್ತು ನಟನೆ ಯಾವುದಕ್ಕೆ ಪ್ರಾಶಸ್ತ್ಯ ನೀಡುತ್ತೀರಿ?
ನಾನು ನಿರ್ದೇಶನಕ್ಕಿಂತ ಹೆಚ್ಚು ನಟನೆಗೆ ಪ್ರಾಶಸ್ತ್ಯನೀಡುತ್ತೇನೆ. ನಿರ್ದೇಶಕರಿಗೆ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ನಟನಾದರೆ ನನ್ನ ನಟನೆಯ ಬಗ್ಗೆ ಹೆಚ್ಚಾಗಿ ಯೋಚಿಸಲು ಸಾಧ್ಯ. ನಿರ್ದೇಶಕನಾದರೆ ಇಡೀ ಚಿತ್ರ ತಂಡದ ಬಗ್ಗೆ ಯೋಚಿಸಬೇಕು.

ಮದುವೆ ಬಳಿಕ ವಿಜಯ ರಾಘವೇಂದ್ರ ಅವರು ಸಿನೆಮಾ ಕಡಿಮೆ ಮಾಡಿದ್ದಾರೆ ಎನ್ನುವ ಮಾತಿದೆಯಲ್ಲವೇ?
ಹಾಗೇನೂ ಇಲ್ಲ. ಚಲನಚಿತ್ರ ಆಯ್ಕೆ ಮಾಡುವ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಥೆಯಲ್ಲಿ ಗಟ್ಟಿತನ ಇರುವ ಚಲನಚಿತ್ರ ಮಾತ್ರ ಒಪ್ಪಿಕೊಳ್ಳುತ್ತೇನೆ. ಹಾಗಿದ್ದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ. ಆಗ ಮತ್ತಷ್ಟು ಅವಕಾಶ ಸಿಗುತ್ತದೆ. ಈ ಹಿಂದೆ ಚಿತ್ರದ ಆಯ್ಕೆಯ ಬಗ್ಗೆ ಅಷ್ಟಾಗಿ ಯೋಚಿಸುತ್ತಿರಲಿಲ್ಲ. ಮದುವೆಯಾದ ಬಳಿಕ ಯೋಚನೆ ಬದಲಿಸಿದ್ದೇನೆ.

ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರಿಕೆ ಸವಾಲು ಎಂಬ ಅಭಿಪ್ರಾಯಕ್ಕೆ ನೀವೇನಂತೀರಾ?
ರಿಯಾಲಿಟಿ ಶೋದಲ್ಲಿ ಓರ್ವರ ತೀರ್ಪು ಮತ್ತೂಬ್ಬರಿಗೆ ಸರಿ ಅನಿಸದೇ ಇರಬಹುದು. ಆದರೆ ಆ ಶೋಗೆ ಒಂದು ಇತಿ ಮಿತಿ ಇರುತ್ತದೆ. ಆ ಪರಿಮಿತಿಯನ್ನು ಗಮನದಲ್ಲಿಟ್ಟುಕೊಂಡು ನಾನು ಸ್ಪರ್ಧಿಗಳಿಗೆ ಸಲಹೆ, ತೀರ್ಪು ನೀಡುತ್ತೇನೆ.

ನಿಮಗೆ ಕಲರಿ ಕಲೆ ತಿಳಿದಿದೆಯಂತೆ ಹೌದಾ? ಸಾಹಸ ಚಲನಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಇದೆಯಾ?
ಕಲ್ಲರಳಿ ಹೂವಾಗಿ ಚಲನಚಿತ್ರದಲ್ಲಿ ನಾನು ನಟಿಸುವ ಸಮಯದಲ್ಲಿ ಕಲರಿ ಕಲೆ ಕಲಿತಿದ್ದೆ. ಬಳಿಕ ಯಾವುದೇ ಚಿತ್ರದಲ್ಲಿ ಈ ಕಲೆ ಪ್ರಯೋಗ ಮಾಡಲಿಲ್ಲ. ಈ ಹಿಂದೆಯೂ ಸಾಹಸ ಚಲನಚಿತ್ರದಲ್ಲಿ ಅಭಿನಯ ಮಾಡುತ್ತಿದ್ದೆ. ಚಿತ್ರದ ಕಥೆಗೆ ಅನುಗುಣವಾಗಿ ಆಯ್ಕೆ ಮಾಡುತ್ತೇನೆ.

ಸ್ಟಾರ್‌ ಗಿರಿ ಬಗ್ಗೆ ನಿಮ್ಮ ಅಭಿಪ್ರಾಯ?
ಯಾವುದೇ ನಟ-ನಟಿಯನ್ನು ಸ್ಟಾರ್‌ ಮಾಡೋದು ಜನ. ಸ್ಟಾರ್‌ ನಟ ಎಂದು ತನ್ನ ವ್ಯಕ್ತಿತ್ವ, ಸ್ವಭಾವ ಬಿಟ್ಟುಕೊಡಬಾರದು. ನಾನು ಈವರೆಗೆ ಯಾವುದೇ ಸ್ಟಾರ್‌ ಪಟ್ಟ ತೆಗೆದುಕೊಂಡಿಲ್ಲ. ಇದು ನನಗೆ ಇಷ್ಟವಾಗುವುದಿಲ್ಲ. ನನಗೆ ಅಭಿಮಾನಿಗಳು ಪ್ರೀತಿಯಿಂದ “ವಿಜಯ ರಾಘವೇಂದ್ರ’ ಎಂದು ಕರೆದರೆ ಅಷ್ಟೇ ಸಾಕು.

ತುಳು ಸಿನೆಮಾ ಕ್ಷೇತ್ರದ ಬಗ್ಗೆ ಅಭಿಪ್ರಾಯ ಏನು?
 ತುಳು ಸಿನೆಮಾ ಕ್ಷೇತ್ರದ ಬಗ್ಗೆ ಅಭಿಪ್ರಾಯ ಏನು? ತುಳು ಮಾತನಾಡುತ್ತೀರಾ?
ತುಳು ಚಿತ್ರರಂಗ ನಿರೀಕ್ಷೆಗೂ ಮೀರಿ ಬೆಳವಣಿಗೆಯಾಗುತ್ತಿದೆ. ಅವಕಾಶ ಸಿಕ್ಕಾಗ ತುಳು ಚಲನಚಿತ್ರ ನೋಡುತ್ತೇನೆ. ತುಳು ಸಿನೆಮಾ ರಂಗದ ಬೆಳವಣಿಗೆ ಎಲ್ಲರ ಗಮನಸೆಳೆಯುತ್ತಿರುವುದು ನಿಜ. ಒಂದೊಳ್ಳೆ ಅವಕಾಶ, ಕಥೆ ಬಂದಾಗ ಖಂಡಿತಾ ತುಳು ಚಿತ್ರದಲ್ಲಿ ನಟಿಸುತ್ತೇನೆ. ನಾನು ತುಳು ಚೆನ್ನಾಗಿ ಮಾತನಾಡುತ್ತೇನೆ. ಅರ್ಥ ಕೂಡ ಆಗುತ್ತದೆ. ನನ್ನ ಹೆಂಡತಿ ಕರಾವಳಿ ಭಾಗದವಳು. ಮದುವೆಯಾಗಿ ಒಂದು ವರ್ಷದಲ್ಲಿ ತುಳು ಕಲಿಯಬೇಕಾಯಿತು. ಇಷ್ಟ ಪಟ್ಟು ಕಲಿತಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next