ಕೋಸ್ಟಲ್‌ವುಡ್‌ನಲ್ಲಿ “ಅಪ್ಪೆ ಟೀಚರ್’ ಸಿನೆಮಾ ಮಾಡಿದ ಸಾಧನೆ ಉಲ್ಲೇಖ ನೀಯ. ತುಳು ಸಿನೆಮಾ ರಂಗದಲ್ಲಿ ಈ ಸಿನೆಮಾ ಹೊಸ ಮನ್ವಂತರವನ್ನೇ ಸೃಷ್ಟಿಸಿತ್ತು. ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್ ಹಾಗೂ ಪ್ರೊಡಕ್ಷನ್ ಅರ್ಪಿಸಿದ ಕೆ. ರತ್ನಾಕರ್ ಕಾಮತ್ ನಿರ್ಮಾಣ ಹಾಗೂ ಕಿಶೋರ್ ಮೂಡುಬಿದಿರೆ ಕಥೆ-ಚಿತ್ರಕಥೆ, ನಿರ್ದೇಶನದ ಸಿನೆಮಾವಿದು.
ಈ ಸಿನೆಮಾದ ಬಳಿಕ ಇದೀಗ ಇದೇ ತಂಡ ಕರುನಾಡಿನಲ್ಲಿ “ಮಾಲ್ಗುಡಿ ಡೇಸ್’ ಮೂಲಕ ತೆರೆಯ ಮುಂದೆ ಬರಲು ಸಿದ್ಧತೆ ನಡೆಸಿದೆ. ಫೆ. 7ರಂದು ಸಿನೆಮಾ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ವಿಶೇಷವೆಂದರೆ, ಅಪ್ಪೆ ಟೀಚರ್ ನಿರ್ದೇಶಕ ಕಿಶೋರ್ ಮೂಡುಬಿದಿರೆ ನಿರ್ದೇಶನದ ಮಾಲ್ಗುಡಿ ಡೇಸ್ ಸಿನೆಮಾದಲ್ಲಿ ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ಕಾಪಿಕಾಡ್ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ. ಕೋಸ್ಟಲ್‌ವುಡ್‌ನಲ್ಲಿ ಹಲವು ಸಿನೆಮಾಗಳ ಮೂಲಕ ಮನೆಮಾತಾದ ಎವರ್‌ಗ್ರೀನ್ ಹೀರೋ ಅರ್ಜುನ್ ಈ ಸಿನೆಮಾದಲ್ಲಿ ಕಥೆಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೋಸ್ಟಲ್‌ವುಡ್‌ನ ನಂಟು ಈ ಸಿನೆಮಾದ ಜತೆಗೆ ಬೆಸೆದುಕೊಂಡಿದೆ.
ಕಳೆದ ವರ್ಷ ಫೆ. 24ಕ್ಕೆ “ಮಾಲ್ಗುಡಿ ಡೇಸ್’ ಸಿನೆಮಾದ ಮುಹೂರ್ತ ನಡೆದಿತ್ತು. ಆ. 3ರ ವರೆಗೆ 3 ಹಂತದಲ್ಲಿ ಚಿತ್ರೀಕರಿಸಿ ಎಡಿಟಿಂಗ್ ಡಬ್ಬಿಂಗ್ ಮುಗಿದಿತ್ತು. ವಿಜಯ ರಾಘವೇಂದ್ರ ವಿಶೇಷ ಪಾತ್ರದ ಮೊದಲ ಪೋಸ್ಟರ್ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ವಿಜಯ ರಾಘವೇಂದ್ರರ ವೃತ್ತಿ ಜೀವನದಲ್ಲಿ ಇದೊಂದು ವಿಶೇಷ ಸಿನೆಮಾ. ಏಕೆಂದರೆ ಇಲ್ಲಿ ಅವರು ಹಿಂದೆಂದೂ ನಿರ್ವಹಿಸದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಕಳೆದ ಒಂದು ವರ್ಷಗಳಿಂದ ವಿಜಯ ರಾಘವೇಂದ್ರ ಅವರು ತಮ್ಮನ್ನು ಬೇರೆ ಯಾವ ಸಿನೆಮಾದಲ್ಲೂ ತೊಡಗಿಸದೆ ತಮ್ಮನ್ನು ಪೂರ್ತಿಯಾಗಿ ಅರ್ಪಿಸಿದ್ದಾರೆ. ಕಥಾ ನಾಯಕಿಯಾಗಿ ಗ್ರೀಷ್ಮಾ ಶ್ರೀಧರ್ ಅವರು ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಅವರ ಜತೆ ಬಿಗ್‌ಬಾಸ್ ಖ್ಯಾತಿಯ ಧನರಾಜ್, ಗೋಪಿನಾಥ್ ಭಟ್, ರೂಪೇಶ್, ತೇಜಸ್ವಿನಿ, ಸಂದೇಶ್ ಜೈನ್ ಇದ್ದಾರೆ.
ಒಟ್ಟು 60 ದಿನಗಳ ಚಿತ್ರೀಕರಣವನ್ನು ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ತೀರ್ಥಹಳ್ಳಿ, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಆಗುಂಬೆ, ಸುತ್ತಮುತ್ತ ಮಾಡಲಾಗಿದೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಒಟ್ಟು 6 ಹಾಡುಗಳಿವೆ. ಪ್ರದೀಪ್ ನಾಯಕ್ ಸಂಕಲನ, ಉದಯ್ ಲೀಲಾ ಕ್ಯಾಮೆರಾ ಕೈಚಳಕವಿದೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ರವಿಶಂಕರ್ ಪೈ, ಪೋಸ್ಟರ್ ಡಿಸೈನರ್ ಆಗಿ ಅಶ್ವಿನ್ ರಮೇಶ್, ಕಾಸ್ಟೂಮ್ ಡಿಸೈನರ್ ಶಿಲ್ಪಾ ಹೆಗ್ಡೆ ಮತ್ತು ರೋಷನ್ ಅಯ್ಯಪ್ಪ ನಿರ್ವಹಿಸಿದ್ದಾರೆ. ವಿಜಯ ರಾಘವೇಂದ್ರ ಅವರ ವಿಶೇಷ ಪಾತ್ರದ ಪ್ರೊಸ್ತೆಟಿಕ್ ಮೇಕಪ್ ಅನ್ನು ಕೇರಳ ಮೂಲದ ರೋಷನ್ ಎನ್.ಜಿ. ಮಾಡಿದ್ದಾರೆ.