ಉಡುಪಿ: ಚಿತ್ರಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಾಲ್ಗುಡಿ ಡೇಸ್ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ಜಗ್ಗೇಶ್ ಪೋಸ್ಟರ್ ಬಿಡುಗಡೆಗೊಳಿಸಿ, ಚಿತ್ರತಂಡವನ್ನು ಶುಭ ಹಾರೈಸಿದರು.
ಪೋಸ್ಟರ್ ಬಹಳ ಭಿನ್ನವಾಗಿದೆ, ವಿಜಯ ರಾಘವೇಂದ್ರರಿಗೆ ಇಲ್ಲಿ ಬಹಳ ವಿಭಿನ್ನ ಪಾತ್ರ ಇದೆ ಎಂದು ಎನಿಸುತ್ತದೆ. ಖಂಡಿತವಾಗಿಯೂ ಈ ಸಿನೆಮಾ ಗೆಲ್ಲುವುದರ ಜತೆಗೆ ಹಲವಾರು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಳ್ಳಲಿದೆ. ಇಂತಹ ವಿಭಿನ್ನ ಪ್ರಯತ್ನಗಳು ಚಿತ್ರರಂಗದಲ್ಲಿ ನಡೆಯುತ್ತಿರಬೇಕು. ಆವಾಗಲೇ ಪ್ರೇಕ್ಷಕರು ಸಂತೃಪ್ತಿಗೊಳ್ಳಲು ಸಾಧ್ಯ ಎಂದು ಜಗ್ಗೇಶ್ ತಿಳಿಸಿದರು.
ತುಳುವಿನಲ್ಲಿ ಅಪ್ಪೆಟೀಚರ್ ಚಿತ್ರ ತಯಾರಿಸಿದ್ದ ನಿರ್ಮಾಪಕ ರತ್ನಾಕರ್ ಕಾಮತ್ ಈ ಸಿನೆಮಾಕ್ಕೆ ಬಂಡವಾಳವನ್ನು ಹಾಕುತ್ತಿದ್ದು, ಅಪ್ಪೆಟೀಚರ್ ನಿರ್ದೇಶಕ ಕಿಶೋರ್ ಮೂಡುಬಿದಿರೆ ರಚಿಸಿ ನಿರ್ದೇಶನ ಮಾಡುತ್ತಿ ದ್ದಾರೆ. ಬಹುತೇಕ ಅಪ್ಪೆಟೀಚರ್ ಚಿತ್ರತಂಡದ ತಾಂತ್ರಿಕ ವರ್ಗವೇ ಮಾಲ್ಗುಡಿ ಡೇಸ್ ಸಿನೆಮಾದಲ್ಲೂ ಕಾರ್ಯ ನಿರ್ವಹಿಸಿದೆ.
ತಾರಾ ಬಳಗದಲ್ಲಿ ವಿಜಯ ರಾಘವೇಂದ್ರ, ಗ್ರೀಷ್ಮ, ಬಿಗ್‌ಬಾಸ್ ಖ್ಯಾತಿಯ ಧನ್‌ರಾಜ್, ಗೋಪಿನಾಥ್ ಭಟ್ ಮುಂತಾದವರು ಇರಲಿದ್ದಾರೆ. ಬಹುತೇಕ ಚಿತ್ರೀಕರಣವನ್ನು ಪೂರೈಸಿರುವ ತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ. ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಕಿಶೋರ್ ಮೂಡುಬಿದಿರೆ ತಿಳಿಸಿದರು.
ಆರಂಭದಿಂದಲೂ ಕುತೂಹಲ ಕಾಯ್ದುಕೊಂಡು ಬಂದಿದ್ದ ಮಾಲ್ಗುಡಿ ಡೇಸ್ ಮೊದಲ ಪೋಸ್ಟರ್ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ.
ನಾಯಕ ನಟ ವಿಜಯ ರಾಘವೇಂದ್ರ 65-70 ವಯಸ್ಸಿನ ವೃದ್ಧನ ಪಾತ್ರದಲ್ಲಿ ಆಕರ್ಷಕವಾಗಿ ಮತ್ತು ವಿಭಿನ್ನವಾಗಿ ಕಾಣುತ್ತಿದ್ದಾರೆ. ಅಪ್ಪೆಟೀಚರ್ ಕಳೆದ ವರ್ಷ ಬಿಡುಗಡೆ ಆಗಿ ನೂರು ದಿನ ಪೂರೈಸಿತ್ತು, ಹಾಗಾಗಿ ಮತ್ತೆ ಅದೇ ತಂಡ ಮಾಲ್ಗುಡಿ ಡೇಸ್‌ನಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ಬಾರಿಯೂ ವಿಭಿನ್ನವಾಗಿ ಮೂಡಿಬರಲಿದೆ ಎಂದು ತಂಡ ವಿಶ್ವಾಸ ವ್ಯಕ್ತಪಡಿಸಿದೆ.