ಮಂಗಳೂರು: ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲೇ ಅತ್ಯಧಿಕ ಮಲೇರಿಯಾ ಪ್ರಕರಣ ಕಂಡುಬರುತ್ತಿದ್ದ ಕರಾವಳಿ ಜಿಲ್ಲೆಗಳಲ್ಲಿ ಸದ್ಯ ಗಣನೀಯ ಇಳಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ 4 ಸಾವಿರಕ್ಕೂ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಪ್ರಕರಣ 168ಕ್ಕೆ, ಉಡುಪಿ ಜಿಲ್ಲೆಯಲ್ಲಿ 2,217ರಿಂದ 18ಕ್ಕೆ ಇಳಿಕೆ ಕಂಡಿದೆ.
ಉಭಯ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಕಾರ್ಯತಂತ್ರಗಳು ಫಲಿಸುತ್ತಿವೆ. ಪ್ರಕರಣ ಕಂಡುಬಂದರೆ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಗಾ ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ವಿಶೇಷ ತರಬೇತಿ ಹೊಂದಿದ ಕಾರ್ಯ ಕರ್ತರು ಮನೆ ಮನೆಗೆ, ನಿರ್ಮಾಣ ಹಂತದ ಕಟ್ಟಡ ಪ್ರದೇಶಕ್ಕೆ ತೆರಳಿ ಸಾರ್ವಜನಿಕರಿಗೆ ಮತ್ತು ಕಾರ್ಮಿಕರಿಗೆ ಮಲೇರಿಯಾ ಪರೀಕ್ಷೆ ಮಾಡುತ್ತಿದ್ದಾರೆ. ಮೊದಲು ರ್ಯಾಪಿಡ್ ಟೆಸ್ಟ್ ನಡೆಸಿ, ಪಾಸಿಟಿವ್ ಬಂದರೆ ರಕ್ತ ಲೇಪನ ಪರೀಕ್ಷೆ ನಡೆಸಲಾಗುತ್ತಿದೆ.
ಮಲೇರಿಯಾ ಸಹಿತ ಕೀಟಜನ್ಯ ರೋಗಗಳ ಕುರಿತು ಉಡುಪಿ, ದ.ಕ., ಚಿಕ್ಕಮಗಳೂರು, ಕೊಡಗು ಒಳಗೊಂಡ ನಾಲ್ಕು ಜಿಲ್ಲೆಗಳ ಕೇಂದ್ರ ಘಟಕ ಮಂಗಳೂರಿನಲ್ಲಿದೆ. ಮಲೇರಿಯಾ ನಿಯಂತ್ರಣ ನಿಟ್ಟಿನಲ್ಲಿ ದ.ಕ., ಉಡುಪಿಯಲ್ಲಿ ಆರೋಗ್ಯ ಇಲಾಖೆಯ ಸ್ವಯಂಸೇವಕರು, ಸ್ಥಳೀಯಾಡಳಿತದ ಎಂಪಿಡಬ್ಲೂ ವರ್ಕರ್ ಪ್ರತೀ ದಿನ ಕ್ಷೇತ್ರ ಭೇಟಿ ನಡೆಸುತ್ತಿದ್ದಾರೆ. ಕೇಂದ್ರ ತಂಡದ ಶ್ಲಾಘನೆ ದ.ಕ.ದಲ್ಲಿ ಮಲೇರಿಯಾ ಗಣಿನೀಯ ಇಳಿಕೆಯನ್ನು ಗಮನಿಸಿ ಕೇಂದ್ರ ಆರೋಗ್ಯ ತಂಡವು ರಾಜ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸ್ವಲ್ಪ ಸಮಯದ ಹಿಂದೆ ಅಧ್ಯಯನ ನಡೆಸಿದ್ದು, ದ.ಕ.ದಲ್ಲಿನನಿಯಂತ್ರಣ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಲೇರಿಯಾ ಪ್ರಕರಣ ಗಣನೀಯ ಇಳಿದಿದೆ. ಆರೋಗ್ಯ ಇಲಾಖೆಯಿಂದಲೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಮಲೇರಿಯಾ ಹರಡುವ ಸೊಳ್ಳೆ ಶುದ್ಧ ನೀರಿನಲ್ಲಿ ಮರಿ ಇಡುತ್ತದೆ. ಮನೆಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಸೇರಿದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ.
- ಡಾ| ನವೀನ್ ಚಂದ್ರ ಕುಲಾಲ್, ಡಾ| ಪ್ರಶಾಂತ್ ಭಟ್,
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ದ.ಕ./ ಉಡುಪಿ ಜಿಲ್ಲೆ
2025ರ ಗುರಿ
2025ರ ವೇಳೆಗೆ “ಮಲೇರಿಯಾ ಮುಕ್ತ ಮಂಗಳೂರು’ ಎಂಬ ಧ್ಯೇಯದೊಂದಿಗೆ ಆರೋಗ್ಯ ಇಲಾಖೆ ಕೆಲಸ ನಿರ್ವಹಿಸುತ್ತಿದೆ. 2025ರ ವೇಳೆಗೆ ಪ್ರಕರಣವನ್ನು ಶೂನ್ಯಕ್ಕಿಳಿಸುವುದು ಇಲಾಖೆಯ ಗುರಿ.
_ನವೀನ್ ಭಟ್ ಇಳಂತಿಲ