ಮುಂಬಯಿ : 2008ರ ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದ ಆರೋಪಿಗಳಾಗಿರುವ ಸಾಧ್ವಿ ಪ್ರಜ್ಞಾ, ಮೇಜರ್ ರಮೇಶ್ ಉಪಾಧ್ಯಾಯ,ಅಜಯ್ ರಾಹೀಕರ್ ಮತ್ತು ಲೆ| ಕ| ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಇಲ್ಲಿನ ವಿಶೇಷ ಸೆಶನ್ಸ್ ನ್ಯಾಯಾಲಯ, 1999ರ ಕರಾಳ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (ಮಕೋಕ) ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆ.17, 20 ಮತ್ತು 13ರ ಅಡಿಯ ವಿಚಾರಣೆಯಿಂದ ಮುಕ್ತಗೊಳಿಸಿದೆ.
ಆದರೆ ಆರೋಪಿಗಳಾದ ಸಾಧ್ವಿ ಪ್ರಜ್ಞಾ ಮತ್ತು ಲೆ| ಕ| ಪುರೋಹಿತ್ ಅವರನ್ನು ಯುಎಪಿಎ ಕಾಯಿದೆಯ ಸೆ.18 ಮತ್ತು ಐಪಿಸಿಯ ಇತರ ಸೆಕ್ಷನ್‌ಗಳಡಿ ವಿಚಾರಣೆಗೆ ಗುರಿಪಡಿಸಲಾಗುವುದು ಎಂದು ಹೇಳಿದೆ.
ಇದೇ ವೇಳೆ ಮುಂಬಯಿ ಸೆಶನ್ಸ್ ಕೋರ್ಟ್ ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದ ಇತರ ಮೂವರು ಆರೋಪಿಗಳನ್ನು ಎಲ್ಲ ಆಪಾದನೆಗಳಿಂದ ಮುಕ್ತಗೊಳಿಸಿದೆ. ಎನ್‌ಐಎ ಈ ಮೂವರು ಆರೋಪಿಗಳಿಗೆ ತನ್ನ ಅಂತಿಮ ಚಾರ್ಜ್‌ಶೀಟ್‌ನಲ್ಲಿ ಕ್ಲೀನ್ ಚಿಟ್ ನೀಡಿತ್ತು. ಹೀಗೆ ಕೋರ್ಟ್ ವಿಚಾರಣೆಯಿಂದ ಮುಕ್ತರಾದವರೆಂದರೆ ಶಿವನಾರಾಯಣ ಕಾಲಸಂಗ್ರ, ಶ್ಯಾಮ ಸಾಹು ಮತ್ತು ಪ್ರವೀಣ್ ತಕ್ಕಾಲ್ಕಿ.
ಈ ನಡುವೆ ರಾಕೇಶ್ ಧವಡೆ ಮತ್ತು ಜಗದೀಶ್ ಮ್ಹಾತ್ರೆ ಅವರನ್ನು ಕೇವಲ ಶಸ್ತ್ರಾಸ್ತ್ರ ಕಾಯಿದೆಯಡಿ ದೋಷಾರೋಪಕ್ಕೆ ಗುರಿಪಡಿಸಲಾಗಿದ್ದು ಇತರೆಲ್ಲ ದೋಪಾರೋಪಗಳಿಂದ ಮುಕ್ತಗೊಳಿಸಲಾಗಿದೆ.
2008ರ ಸೆ.29ರ ಸಂಜೆ ಮಾಲೇಗಾಂವ್‌ನ ನೂರಾಜಿ ಮಸೀದಿ ಬಳಿ ಅತ್ಯಂತ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡು ಆರು ಮಂದಿ ಮಡಿದಿದ್ದು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದನ್ನು ಹಿಂದೂ ಭಯೋತ್ಪಾದಕ ಕೃತ್ಯವೆಂದು ಬಣ್ಣಿಸಲಾಗಿತ್ತು.