Advertisement

ಆಧ್ಯಾತ್ಮಿಕ ಸತ್ಯ ಶೋಧನೆಯೇ ಶರಣರ ಗುರಿಯಾಗಿತ್ತು

12:52 PM May 08, 2019 | Naveen |

ಮಲೇಬೆನ್ನೂರು: ಬಸವ ಜಯಂತಿ ಶುಭದಿನವಾದ ಇಂದು ಶರಣರ ಬದುಕನ್ನು ಆಲೋಚನೆ ಮಾಡಬೇಕಿದೆ ಹಾಗೂ ಅವರು ಹೇಗೆ ಬದುಕಿದ್ದರು ಎಂದು ಚಿಂತನೆ ಮಾಡಬೇಕಿದೆ ಎಂದು ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

Advertisement

ಅವರು ಮಂಗಳವಾರ ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್‌ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಶರಣರಿಗೂ ಒಂದು ಸಂಸಾರವಿತ್ತು. ಸಾಂಸಾರಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಅವರ ಗುರಿ ಆಧ್ಯಾತ್ಮಿಕ ಸತ್ಯವನ್ನು ಕಂಡುಕೊಳ್ಳುವುದಾಗಿತ್ತು ಎಂದರು.

ಪರಮಾತ್ಮನ ಸಾಕ್ಷಾತ್ಕಾರ ಅವರ ಗುರಿಯಾಗಿತ್ತು. ಹಾಗಿದ್ದರೂ ಎಲ್ಲೂ ಸಾಂಸಾರಿಕ ಜವಾಬ್ದಾರಿ ಮತ್ತು ಕಾಯಕದಿಂದ ಅವರು ವಿಮುಕ್ತರಾಗದೆ ಕಾಯಕಕ್ಕೆ ಅತ್ಯಂತ ಪ್ರಾಧಾನ್ಯತೆ ಕೊಟ್ಟಿದ್ದರು. ಕಷ್ಟದಿಂದ ಬಂದವರಿಗೆ ಅನ್ನವನ್ನು ನೀಡಿ, ಉದ್ಯೋಗದ ಪರಿಕಲ್ಪನೆ ನೀಡಿ ಅವರಿಗೂ ಸನ್ಮಾರ್ಗ ತೋರುತ್ತಿದ್ದರು. ಇಂತಹ ಶರಣರ ಜಯಂತ್ಯುತ್ಸವನ್ನು ಆದರ್ಶಪೂರ್ಣವಾಗಿ ಆಚರಿಸಲೇಬೇಕೆಂದಾದರೆ ನಮ್ಮ ಬದುಕಿನಲ್ಲಿ ನಾವು ಪರಿಶುದ್ಧ ಪ್ರಾಮಾಣಿಕ ಕಾಯಕದಲ್ಲಿ ಬದುಕಬೇಕು ಎಂದರು.

ಜಗತ್ತು ಶ್ರೀಮಂತರನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಯಾರು ತನ್ನನ್ನು ಇತರರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೋ ಅಂತಹ ವ್ಯಕ್ತಿಯನ್ನು ಸ್ಮರಿಸುತ್ತದೆ. ಆದ್ದರಿಂದಲೇ ಸೇವೆ ಅತ್ಯಂತ ಮಹತ್ತರವಾದುದು ಎಂದರು.

ಸರಳವಾದ ಒಂದು ಮದುವೆ ಮಾಡಲು ಕನಿಷ್ಟ ಎರಡರಿಂದ ಮೂರು ಲಕ್ಷ ರೂ. ಖರ್ಚು ಆಗುತ್ತದೆ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿದಲ್ಲಿ ಇಂತಹ ಖರ್ಚನ್ನು ತಡೆದು ಆ ಹಣದಿಂದ ಸಣ್ಣ ಮನೆಯನ್ನೇ ಕಟ್ಟಬಹುದು. ತೋಟದಲ್ಲಿ ಬೋರ್‌ ತೆಗೆಸಿ ನೀರಿನ ಬವಣೆ ತಪ್ಪಿಸುವ ಅವಕಾಶವಿದೆ ಎಂದರು.

Advertisement

ಮದುವೆ ಎರಡು ಉದ್ದೇಶಗಳ ಹಿನ್ನೆಲೆಯಲ್ಲಿ ನಡೆಯಬೇಕು. ಒಂದು, ನಿಮಗೆ ಹುಟ್ಟುವ ಸಂತತಿಯಿಂದ ನಿಮ್ಮ ಕುಟುಂಬ ವ್ಯವಸ್ಥೆ ಬೆಳೆಸುವುದು. ಇನ್ನೊಂದು ನಿಮಗೆ ಹುಟ್ಟುವ ಸಂತತಿಗೆ ಧರ್ಮದ ಸಂಸ್ಕಾರವನ್ನು, ಜ್ಞಾನವನ್ನು ಕೊಟ್ಟು ಬೆಳಸುವುದರ ಮೂಲಕ ಅವರನ್ನೇ ಒಂದು ಆಸ್ತಿಯನ್ನಾಗಿ ಮಾಡಬೇಕು ಎಂದರು.

ದೇಶದ ಆಸ್ತಿಯನ್ನು ಹೊಡೆದು ಬಹಳಷ್ಟು ಬೇಗ ಶ್ರೀಮಂತರಾಗಬೇಕೆಂಬ ಮನೋಭಾವ ಬಹಳಷ್ಟು ಜನರಲ್ಲಿ ಇಂದು ಇರುವುದನ್ನು ಕಂಡಿದ್ದೇನೆ. ಪ್ರತಿಯೊಬ್ಬರೂ ನಾಡನ್ನು ಕಟ್ಟಬೇಕು. ಈ ಪುಣ್ಯಭೂಮಿಯನ್ನು ಉಳಿಸಬೇಕು ಎನ್ನುವಂತಹ ಮನೋಭಾವ ಬೆಳೆಸಿಕೊಳ್ಳಬೇಕು. ಸಾಧ್ಯವಾದಷ್ಟು ಮೋಸದ ಜೀವನ ಬಿಟ್ಟು ಸತ್ಯ, ಶುದ್ಧ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೌಟುಂಬಿಕ ವ್ಯವಸ್ಥೆಯನ್ನು ಬೆಳೆಸಿದರೆ ಸಾಕು ಎಂದರು.

ಸಾರ್ವತ್ರಿಕವಾಗಿ ಎಲ್ಲರೂ ಒಳ್ಳೆಯವರಾದರೆ, ಎಲ್ಲರೂ ಪರಿಶುದ್ಧ, ಪ್ರಾಮಾಣಿಕ ಕಾಯಕದಲ್ಲಿ ಬದುಕಿದರೆ, ಈ ದೇಶದ ಬದಲಾವಣೆ ಆಗುತ್ತದೆ. ಅದಕ್ಕೆ ಎಲ್ಲರೂ ಚಿಂತನೆ ಮಾಡಬೇಕಿದೆ ಎಂದರು.

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಟ್ರಸ್ಟನ ಅಧ್ಯಕ್ಷ ಕಣ್ಣಾಳ ಧರ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಮಂಜುನಾಥ ಪಟೇಲ್ ಮತ್ತು ವರ್ತಕ ಬಿ. ವೀರಯ್ಯ ಮಾತನಾಡಿದರು.

ಮುಖಂಡರಾದ ಪೂಜಾರ್‌ ಗಂಗೇನಳ್ಳೆಪ್ಪ, ಮಾಗನಹಳ್ಳಿ ಹಾಲಪ್ಪ, ದಾನಯ್ಯನವರ ಮಂಜುನಾಥ್‌, ಬಾರಿಕರ ಮಲ್ಲಿಕಾರ್ಜುನ, ಬಿ.ಎಂ. ಜಯದೇವಯ್ಯ, ಕಣ್ಣಾಳ್‌ ಪರಶುರಾಮಪ್ಪ, ಮುದೇಗೌಡ್ರ ಬಸವರಾಜಪ್ಪ, ಪೂಜಾರ್‌ ನಾಗಪ್ಪ, ಕೆ.ಪಿ. ಗಂಗಾಧರ್‌, ಎಂ.ಎನ್‌ ಮಂಜುನಾಥ್‌, ಮೈಲಾರಪ್ಪ, ಬಿ. ಸುರೇಶ್‌, ಇತರರು ಇದ್ದರು.

ಬಿಂದು ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಕರಿಬಸಪ್ಪ ನಿರೂಪಿಸಿದರು. ದಂಡಿ ತಿಪ್ಪೇಸ್ವಾಮಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next