Advertisement

ಮಸೀದಿ ಆಡಳಿತ ಮಂಡಳಿ ಅಮಾನತಿಗೆ ಆಗ್ರಹ

12:34 PM May 09, 2019 | Team Udayavani |

ಮಲೇಬೆನ್ನೂರು: ಸುನ್ನಿ ಪಂಥಕ್ಕೆ ಸೇರಿದ ಪಟ್ಟಣದ ಜುಮ್ಮಾ ಮಸೀದಿ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿ ತಕ್ಷಣವೇ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಮೊಹಮ್ಮದ್‌ ಫಾಜಿಲ್, ಎಂ.ಬಿ.ಶೌಕತ್‌ ಅಲಿ, ವಕೀಲ ನಿಸಾರ್‌ ಅಹ್ಮದ್‌ ಮತ್ತಿತರರು ಒತ್ತಾಯಿಸಿದ್ದಾರೆ.

Advertisement

ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜುಮ್ಮಾ ಮಸೀದಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ ಎಂದು ವಕ್ಫ್ ಬೋರ್ಡ್‌ಗೆ ಮೊಹಮ್ಮದ್‌ ಫಾಜಿಲ್ ದೂರು ನೀಡಿದ್ದರು. ಅದರನ್ವಯ ವಿಚಾರಣೆ ನಡೆಸಿದ ರಾಜ್ಯ ವಕ್ಫ್ ಬೋರ್ಡ್‌ನ ವಿಚಾರಣಾಧಿಕಾರಿ, ಆಡಳಿತ ಮಂಡಳಿಯನ್ನು ಅಮಾನತುಗೊಳಿಸುವಂತೆ ಶಿಫಾರಸ್ಸು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯನ್ನು ತಕ್ಷಣವೇ ಅಮಾನತುಗೊಳಿಸಿ, ಮಸೀದಿಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು. ತಡವಾದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಿ. ಮೊಹ್ಮದ್‌ ರೋಷನ್‌ ತಮ್ಮ ರಾಜಕೀಯ ಪ್ರಭಾವ ಬಳಸಿ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ. ಮಸೀದಿ ಕಮೀಟಿ ರದ್ದುಗೊಳಿಸಿ, ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ಫಿರ್ಯಾದುದಾರರಾದ ಮೊಹಮ್ಮದ್‌ ಫಾಜಿಲ್ ಅಜ್ಜ ಅಬ್ದುಲ್ ಖಾದರ್‌ ಸಾಬ್‌ 1947ರ ಏ. 12ರಂದು 7ಎಕರೆ 22 ಗುಂಟೆ ಜಮೀನನ್ನು ಜುಮ್ಮಾ ಮಸೀದಿಗೆ ದಾನವಾಗಿ ನೀಡಿದ್ದರು. ಮಸೀದಿಯ ಆಡಳಿತ ಮಂಡಳಿಯವರು ದಾನ ನೀಡಿದವರ ಉದ್ದೇಶದಂತೆ ಜಮೀನಿನ ಆದಾಯವನ್ನು ಬಳಸದೆ, ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಕ್ಫ್ ಮಂಡಳಿಗೆ ದೂರು ನೀಡಲಾಗಿತ್ತು.

ವಕ್ಫ್ ಬೋರ್ಡ್‌ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಸೀದಿ ಕಮೀಟಿ ಅಧ್ಯಕ್ಷ ಎಂ.ಬಿ.ಮೊಹ್ಮದ್‌ ರೋಷನ್‌ ಹಾಗೂ ಇನ್ನಿತರ ಸದಸ್ಯರು, ದೂರುದಾರ ಮೊಹ್ಮದ್‌ ಫಾಜಿಲ್ ಹಾಗೂ ಕುಟುಂಬ ಸದಸ್ಯರು, ಸ್ನೇಹಿತರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಮೊಹ್ಮದ್‌ ಫಾಜಿಲ್ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದರು.

Advertisement

ಕಾಂಪೌಂಡ್‌ ಒಂದು-ಬಿಲ್ ಎರಡು: ಜುಮ್ಮಾ ಮಸೀದಿಗೆ ಸೇರಿದ ನಂದಿಗುಡಿ ರಸ್ತೆಯಲ್ಲಿನ ಖಬರಸ್ಥಾನದ ಸುತ್ತಲೂ ಪುರಸಭೆಯ ಅನುದಾನದಲ್ಲಿ ಕಾಂಪೌಂಡ್‌ ನಿರ್ಮಿಸಲಾಗಿತ್ತು. ಈ ಬಗ್ಗೆ ಪುರಸಭೆಯವರು ಕಾಮಗಾರಿ ವಿವರದ ಫಲಕವನ್ನು ಕಾಂಪೌಂಡ್‌ ಮೇಲೆ ಬರೆಸಿದ್ದರು.

ಕೆಲ ದಿನಗಳ ಬಳಿಕ ಗ್ರಾಮದ 155ನೇ ಸ.ನಂ. ನಲ್ಲಿ ನಿಗದಿಪಡಿಸಲಾಗಿರುವ ಹೊಸ ಸ್ಮಶಾನದ ಕಾಂಪೌಂಡ್‌ ನಿರ್ಮಾಣಕ್ಕೆ ವಿಧಾನ ಪರಿಷತ್‌ ಸದಸ್ಯ ಅಬ್ದುಲ್ ಜಬ್ಟಾರ್‌ರವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಹಣ ಮಂಜೂರಾಗಿತ್ತು.

ನಂದಿಗುಡಿ ರಸ್ತೆಯಲ್ಲಿನ ಖಬರಸ್ಥಾನದಲ್ಲಿ ಪುರಸಭೆ ನಿರ್ಮಿಸಿದ್ದ ಈ ಹಿಂದಿನ ಕಾಂಪೌಂಡ್‌ ಕಾಮಗಾರಿಯ ನಾಮಫಲಕವನ್ನು ಅಳಿಸಿ ಹಾಕಿ ಅದರ ಮೇಲೆಯೇ ಎಂಎಲ್ಸಿ ಅಬ್ದುಲ್ ಜಬ್ಟಾರ್‌ ಸಾಬ್‌ರವರ ಅನುದಾನದಲ್ಲಿ ಕೈಗೊಳ್ಳಲಾದ ಕಾಂಪೌಂಡ್‌ ಕಾಮಗಾರಿ ಎಂದು ನಾಮಫಲಕ ಬರೆಸಿದ್ದಾರೆ. ಹೀಗೆ ಸ.ನಂ.155ರಲ್ಲಿನ ಖಬರಸ್ಥಾನಕ್ಕೆ ಇದುವರೆಗೂ ಯಾವುದೇ ಕಾಂಪೌಂಡ್‌ ನಿರ್ಮಿಸದೆ, ಅನುದಾನ ಗುಳುಂ ಮಾಡಿದ್ದರು. ಆರೋಪ ಕೇಳಿ ಬಂದ ಮೇಲೆ ನಾಮಫಲಕ ಅಳಿಸಿ ಹಾಕಿ ಪುನಃ ಪುರಸಭೆ ಕಾಮಗಾರಿಯ ನಾಮಫಲಕ ಬರೆಸಿದ್ದಾರೆ ಎಂದು ಆರೋಪಿಸಿದರು.

ಮಸೀದಿ ಆಡಳಿತ ಮಂಡಳಿ ಆಯ್ಕೆ ಅಕ್ರಮವಾಗಿ ನಡೆದಿದ್ದು, ಕಮಿಟಿ ರಚಿಸುವ ಸಭೆಗೆ ಸತ್ತವರೂ ಸಹ ಹಾಜರಾಗಿ ಸಹಿ ಹಾಕಿರುವುದಕ್ಕೆ ಸಾಕ್ಷಿ ದೊರೆತಿದೆ. ಸಭೆ ನಡೆಯುವುದಕ್ಕಿಂತ 4 ತಿಂಗಳು ಮೊದಲೆ ನಿಧನರಾಗಿದ್ದ ರಿಯಾಜ್‌ ಹಾಗೂ ಮಜೀದ್‌ ಸಾಬ್‌ ಕಮಿಟಿ ಆಯ್ಕೆ ಸಭೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸಹಿ ಹಾಕಿದ್ದಾರೆ. ಸತ್ತವರು ಬಂದು ಹೇಗೆ ಸಹಿ ಹಾಕಿದರು ಎಂಬುದಕ್ಕೆ ಕಮಿಟಿಯವರು ಉತ್ತರಿಸಬೇಕು ಎಂದು ಸವಾಲೆಸೆದರು.

ಶಾದಿ ಮಹಲ್ನಲ್ಲಿ ಮತ್ತು ನ್ಯಾಷನಲ್ ಶಾಲೆಯಲ್ಲೂ ಅವ್ಯವಹಾರದ ಶಂಕೆ ಇದೆ. ತನಿಖೆಯಿಂದ ಸತ್ಯ ಬಯಲಿಗೆ ಬರಬೇಕಿದೆ ಎಂದು ಒತ್ತಾಯಿಸಿದರು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮುಖಂಡರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ನಿಸಾರ್‌ ಅಹ್ಮದ್‌ ಖಾನ್‌, ಮೀರ್‌ಅಜಂ, ಸಯ್ಯದ್‌ ಖಾಲಿದ್‌, ಜಮೀರ್‌ ಅಹ್ಮದ್‌, ಸಯ್ಯದ್‌ ಫಾಜಿಲ್, ಆಶಿಕ್‌ ಅಲಿ, ಮುನಾವರ್‌, ಚಮನ್‌ ಖಾನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next