Advertisement

ಸಂಪರ್ಕ ರಸ್ತೆ ಸಮಸ್ಯೆ ಪರಿಹರಿಸಲು ಮನವಿ

07:37 PM Dec 26, 2019 | Naveen |

ಮಲೇಬೆನ್ನೂರು: ಸಮೀಪದ ಕೋಮಾರನಹಳ್ಳಿ-ಹೊಸೂರು ಗ್ರಾಮದಿಂದ ಹೊಲಗಳಿಗೆ ಮತ್ತು ಶಾಲೆಗೆ ಸಂಚರಿಸುವ ಸಂಪರ್ಕ ರಸ್ತೆ ಬಂದ್‌ ಮಾಡಿದ್ದು ರಸ್ತೆ ಸಮಸ್ಯೆ ಪರಿಹರಿಸಿಕೊಡುವಂತೆ ಗ್ರಾಮಸ್ಥರು ಮಂಗಳವಾರ ತಹಶೀಲ್ದಾರ್‌ ರಾಮಚಂದ್ರಪ್ಪಗೆ ಮನವಿ ಮಾಡಿದರು.

Advertisement

ರಸ್ತೆ ಸಮಸ್ಯೆ ಪರಿಶೀಲನೆಗೆ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ಗೆ ಸಮಸ್ಯೆ ವಿವರಿಸಿದ ಗ್ರಾಮಸ್ಥರುಮ ಸರ್ಕಾರಿ ಗೋಮಾಳದಲ್ಲಿ ಶಾಲೆ ನಿರ್ಮಿಸಲಾಗಿದ್ದು ಶಾಲೆಗೆ ಮತ್ತು ಶಾಲೆ ಹಿಂಭಾಗದ ಹೊಲಗಳಿಗೆ ಸಂಚರಿಸಲು ರಸ್ತೆ ಇಲ್ಲ. ಶಾಲೆಗೆ ಹೊಂದಿಕೊಂಡಿರುವ ಸ.ನಂ. 93/1ರ ಜಮೀನಿನ ಮೂಲಕವೇ ಸಂಚರಿಸಬೇಕಿದೆ. ಆದರೆ ಜಮೀನಿನ ಮಾಲೀಕರು ರಸ್ತೆ ನಿರ್ಮಿಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಜಮೀನು ಗಂಗಾಧರಯ್ಯ, ಸುವರ್ಣಮ್ಮ, ಮಹದೇವಮ್ಮ ಎಂಬುವರ ಹೆಸರಿನಲ್ಲಿದ್ದು, ಇವರ ಮಕ್ಕಳಾದ ಕರಿಬಸಯ್ಯ, ಗದ್ದಿಗೆಯ್ಯ, ವೀರಯ್ಯ, ಉಮೇಶ್ವರಯ್ಯ, ಚಂದ್ರಯ್ಯ, ಮಹೇಶ್ವರಯ್ಯ ಎಂಬುವರು ತಮ್ಮ ಹೊಲದ ಸರ್ವೇ ಮಾಡಿಸಿ ಹೊಲದಲ್ಲಿ ಹಾದು ಹೋಗಿದ್ದ ರಸ್ತೆ ಬಂದ್‌ ಮಾಡಿದ್ದಾರೆ ಎಂದು ತಿಳಿಸಿದರು.

ಖಾಸಗಿ ಜಮೀನು ಮಾಲೀಕರು ಮಾತನಾಡಿ, ಈ ಹಿಂದೆ ನಮ್ಮ ಹೊಲದಲ್ಲೇ ರಸ್ತೆ ಮಾಡಿದ್ದಾರೆ. ಕಳೆದ 8 ವರ್ಷಗಳ ಹಿಂದೆ ಸರ್ವೇ ಮಾಡಿಸಿದಾಗ ರಸ್ತೆ ನಮ್ಮ ಹೊಲದೊಳಗೆ ಬಂದಿದ್ದರಿಂದ ರಸ್ತೆಗೆ ಬೇಲಿ ಹಾಕಿದ್ದೆವು. ಆಗಿನ ಉಪತಹಶೀಲ್ದಾರ್‌ ರೇಹಾನ್‌ ಪಾಶಾ ಸ್ಥಳಕ್ಕೆ ಬಂದು ನಕ್ಷೆ ಪ್ರಕಾರ ಮೂಲ ಜಾಗದಲ್ಲೇ ರಸ್ತೆ ಮಾಡುತ್ತೇವೆ. ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಲು ರಸ್ತೆ ತೆರವುಗೊಳಿಸುವಂತೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಬೇಲಿ ತೆಗೆದು ರಸ್ತೆ ತೆರವುಗೊಳಿಸಿದ್ದೆವು.

ಮುಚ್ಚಿ ಹೋಗಿರುವ ಜಿ.ಟಿ. ಕಟ್ಟೆ ಮೂಲ ರಸ್ತೆ ಅಭಿವೃದ್ಧಿ ಮಾಡದೆ ನಮ್ಮ ಹೊಲದಲ್ಲೇ ಜನರು ಓಡಾಡುತ್ತಿದ್ದರು. ಇತ್ತೀಚೆಗೆ ನಮ್ಮ ಹೊಲದಲ್ಲೇ ರಸ್ತೆ ಅಭಿವೃದ್ಧಿ ಕಾರ್ಯ ಆರಂಭಿಸಿದ್ದರಿಂದ ಅದನ್ನು ತಡೆದಿದ್ದೇವೆ. ಇಲ್ಲಿ ಹೊಸದಾಗಿ ಯಾವುದೇ ರಸ್ತೆ ನಿರ್ಮಿಸಬೇಡಿ, ಅಧಿಕೃತ ಜಿ.ಟಿ. ಕಟ್ಟೆಯ ಮೂಲ ರಸ್ತೆ ನಿರ್ಮಾಣ ಮಾಡಿಸಿ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡರು.

Advertisement

ಈ ಮಧ್ಯೆ ಗ್ರಾಮಸ್ಥರು ಹಾಗೂ ಜಮೀನು ಮಾಲೀಕರ ಮಧ್ಯೆ ಹಲವಾರು ಬಾರಿ ಮಾತಿನ ಚಕಮಕಿ ನಡೆಯಿತು. ಜಮೀನಿನ ಮಾಲೀಕರು ಕಂದಾಯ ಇಲಾಖೆ ನಕಾಶೆಯಲ್ಲಿರುವಂತೆ ರಸ್ತೆ ನಿರ್ಮಿಸಲು ತಹಶೀಲ್ದಾರ್‌ ರಾಮಚಂದ್ರಪ್ಪಗೆ ಮನವಿ ಮಾಡಿದರು. ಸಾರ್ವಜನಿಕರ ಉಪಯೋಗಕ್ಕಾಗಿ ತಮ್ಮ ಜಮೀನಿನ ಸ್ವಲ್ಪ ಭಾಗ ಕೊಡಿ. ಅಥವಾ ನಿಮ್ಮ ಜಮೀನು ಭೂ ಸ್ವಾಧೀನ ಪಡಿಒಸಿಕೊಂಡು ನಿಮಗೆ ಪರಿಹಾರ ನೀಡುತ್ತೇವೆ. ಅಲ್ಲಿಯವರೆಗೆ ಸಂಚಾರಕ್ಕೆ ರಸ್ತೆ ತೆರವುಗೊಳಿಸಿ ಎಂಬ ತಹಶೀಲ್ದಾರ್‌ ಮನವಿಗೆ ಒಪ್ಪದ ಜಮೀನು ಮಾಲೀಕರು, ಹಿಂದೆ ಉಪತಹಶೀಲ್ದಾರ್‌ ಕೂಡ ಹೀಗೆಯೇ ಭರವಸೆ ನೀಡಿ ಹೋಗಿದ್ದರು. ಇಂತಿಷ್ಟು ದಿನಗಳೊಳಗೆ ಮೂಲ ರಸ್ತೆ ಅಭಿವೃದ್ಧಿ ಮಾಡುವುದಾಗಿ ಬರವಣಿಗೆಯಲ್ಲಿ ಕೊಡಿ. ಇಲ್ಲದಿದ್ದರೆ, ಮಕ್ಕಳು ಶಾಲೆಗೆ ಹೋಗುವಂತೆ ಮಾತ್ರ ಒಂದು ಭಾಗ ತೆರವುಗೊಳಿಸುತ್ತೇವೆ. ಮತ್ತೂಂದು ಭಾಗವನ್ನು ಸಮಸ್ಯೆ ಬಗೆಹರಿದ ಮೇಲೆ ತೆರವುಗೊಳಿಸುತ್ತೇವೆ ಎಂದು ಪಟ್ಟುಹಿಡಿದರು.

ಅದೇ ರೀತಿ ಶಾಲೆಗೆ ಮಾತ್ರ ಹೋಗಲು ಒಂದು ಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಮಣ್ಣಿನ ಗುಡ್ಡೆಯನ್ನು ಅಧಿಕಾರಿಗಳು ತೆರವುಗೊಳಿಸಿದರು. ಆದರೆ ಹೊಲಗಳಿಗೆ ಹೋಗುವ ರಸ್ತೆ ತೆರವುಗೊಳಿಸದೆ ಹಾಗೆಯೇ ಬಿಟ್ಟರು. ಉಪತಹಶೀಲ್ದಾರ್‌ ಖಲೀಮುಲ್ಲಾ, ಸರ್ವೇ ಅಧಿಕಾರಿ ಜೀವನ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next