ಮಲೇಬೆನ್ನೂರು: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರಾವರಿ ನಿಗಮದ ನಂ.3 ಭದ್ರಾ ನಾಲಾ ವಿಭಾಗವನ್ನು ಹೊನ್ನಾಳಿ ಪಟ್ಟಣಕ್ಕೆ ಸ್ಥಳಾಂತರಿಸುವ ಕುರಿತು ಹೊನ್ನಾಳಿ ಶಾಸಕರು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಪತ್ರದ ಬಗ್ಗೆ ಚರ್ಚೆ ನಡೆಯುತ್ತಿರುವುದನ್ನು ಕೇಳಿದ್ದೇನೆ. ಪಟ್ಟಣದಲ್ಲಿರುವ ವಿಭಾಗ ಕಚೇರಿಯನ್ನು ಸ್ಥಳಾಂತರಿಸಬಾರದು ಭದ್ರಾ ಜಲಾಶಯ ಬಳಕೆದಾರರ ಮಹಾಮಂಡಲದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಒತ್ತಾಯಿಸಿದರು.
ಪಟ್ಟಣದ ನೀರಾವರಿ ನಿಗಮದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನೀರಾವರಿ ನಿಗಮದ ಬಸವಪಟ್ಟಣ ಉಪವಿಭಾಗವನ್ನು ಸಾಸ್ವೆಹಳ್ಳಿ ಉಪವಿಭಾಗದಲ್ಲಿ ವಿಲೀನಗೊಳಿಸುವುದು ಮತ್ತು ಮಲೇಬೆನ್ನೂರಿನ ನಂ. 3 ಭದ್ರಾ ನಾಲಾ ವಿಭಾಗವನ್ನು ಹೊನ್ನಾಳಿಗೆ ಸ್ಥಳಾಂತರಿಸುವಂತೆ ವಿಭಾಗ ಕಚೇರಿಗೆ ಪತ್ರ ಬಂದಿದೆ. ಜಲಾಶಯ ಆರಂಭದಿಂದಲೂ ಸೂಕ್ತ ಸ್ಥಳದಲ್ಲಿ ಉಪ ವಿಭಾಗ ಮತ್ತು ವಿಭಾಗೀಯ ಕಚೇರಿಗಳನ್ನು ಆರಂಭಿಸಿದ್ದರಿಂದ ಅಧಿಕಾರಿಗಳಿಗೆ ಹಾಗೂ ರೈತರಿಗೂ ಕಚೇರಿಗೆ ಆಗಮಿಸಲು ಅನುಕೂಲವಾಗಿದೆ.
ಮಲೇಬೆನ್ನೂರು ಶಾಖಾ ನಾಲೆ 23,777 ಹೆಕ್ಟೇರ್, ಆನ್ವೇರಿ ಶಾಖಾ ನಾಲೆ ಮತ್ತು ದೇವರಬೆಳಕೆರೆ ಪಿಕಪ್ ಯೋಜನೆಯ 10.599 ಹೆಕ್ಟೇರ್ ಸೇರಿದಂತೆ ಒಟ್ಟು ಅಚ್ಚುಕಟ್ಟು ಪ್ರದೇಶ 34,373 ಹೆಕ್ಟೇರ್ ಇದೆ. ಹೊನ್ನಾಳಿ ತಾಲೂಕು ಕೇವಲ 8,842 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, ಹರಿಹರ ತಾಲೂಕಿನ ಕೊನೆ ಭಾಗದ 25 ಹಳ್ಳಿಗಳ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮಲೇಬೆನ್ನೂರಿನ ಕಚೇರಿ ಸಮೀಪವಿದೆ. ಜಿಲ್ಲಾ ಧಿಕಾರಿಗಳ ಕಚೇರಿ 30 ಕಿಮೀ ಇದ್ದು, ಹೊನ್ನಾಳಿಯಿಂದ ದಾವಣಗೆರೆ 60 ಕಿಮೀ ಆಗುತ್ತದೆ. ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಕೊಮಾರನಹಳ್ಳಿ ಅಕ್ವಡೆಕ್ಟ್ ಬಳಿ ನಿಗದಿತ ಗೇಜು ಇರುವಂತೆ ಸನೋಡಿಕೊಳ್ಳುವ ಜವಾಬ್ದಾರಿ ಹಾಗೂ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವುದು ವಿಭಾಗ ಕಚೇರಿಯ ಜವಾಬ್ದಾರಿಯಾಗಿದೆ. ಇನ್ನೂ ಹಲವು ಕಾರಣಗಳಿಂದ ಹೊನ್ನಾಳಿಗೆ ವಿಭಾಗ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದರು.
ಹೊನಾಳಿ ತಾಲೂಕಿನ ಶಾಸಕರು ಅನುಕೂಲಸ್ಥರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಭಾಗ ಕಚೇರಿಯನ್ನು ಸ್ಥಳಾಂತರಿಸುವಂತೆ ಪತ್ರ ಬರೆದಿರುವುದು ಖಂಡನೀಯ. ಒಂದು ವೇಳೆ ಸ್ಥಳಾಂತರಿಸಲು ಒತ್ತಾಯ ಮಾಡಿದಲ್ಲಿ ಹರಿಹರ ತಾಲೂಕಿನ ರೈತರು, ಐದು ಮಠಗಳ ಮಠಾಧಿಧೀಶರು, ರೈತ ಸಂಘಟನೆಗಳು, ಜನಪ್ರತಿನಿಧಿಗಳೊಂದಿಗೆ ಪಕ್ಷಾತೀತ ಹೋರಾಟ ನಡೆಸಬೇಕಾಗುತ್ತದೆ ಎಂದು ಹೊಳೆಸಿರಿಗೆರೆಯ ರೈತ ತಿಪ್ಪೇರುದ್ರಪ್ಪ, ಬಿ.ಜಿ. ಧನಂಜಯ, ವೀರನಗೌಡ, ಮಂಜುನಾಥ ಪಟೇಲ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ :ಮೀಸಲಿಗೆ ಆಗ್ರಹಿಸಿ ಒನಕೆ ಪ್ರದರ್ಶನ
ಸುದ್ದಿಗೋಷ್ಠಿಯಲ್ಲಿ ಎ. ಆಂಜನೇಯ, ಧರಿಯಪ್ಪ, ಮಲ್ಲೇಶಪ್ಪ, ಮಹೇಶ್ವರಪ್ಪ,ವೆಂಕಟೇಶ್, ಸೋಮಶೇಖರಪ್ಪ, ಅಶೋಕ್, ನಂದಿಗೌಡ್ರು, ಮಂಜುನಾಥ, ರಂಗನಾಥ್, ಭಾವಿಕಟ್ಟೆ ಹನುಮಂತಪ್ಪ, ಚಂದ್ರಶೇಖರಪ್ಪ, ಉಮಾಪತಿ, ಚನ್ನಬಸಪ್ಪ, ಕೆಂಚಪ್ಪ, ಕರಿಯಪ್ಪ ಹಾಗೂ ವಾಸನ, ಕುಣೆಬೆಳಕೆರೆ, ಯಲವಟ್ಟಿ, ಹಳ್ಳಿಹಾಳ್, ಬೂದಿಹಾಳ್, ಭಾನುವಳ್ಳಿ, ಕಡ್ಲೆಗೊಂದಿ, ನಂದಿತಾವರೆ, ಸಿರಿಗೆರೆ, ಕಡರನಾಯಕನಹಳ್ಳಿ, ಜಿಗಳಿ, ಜಿ. ಬೇವಿನಹಳ್ಳಿ, ನಿಟ್ಟೂರು ಗ್ರಾಮದ ರೈತರು ಇದ್ದರು.