ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಕಳೆದ 54 ದಿನದ ಅವಧಿಯಲ್ಲಿ 2.21ಕೋಟಿ ನಗದು, 40ಗ್ರಾಂ ಚಿನ್ನ ಮತ್ತು 1.6ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ ಪ್ರಾರಂಭವಾದ ಹುಂಡಿ ಎಣಿಕೆ ಮಧ್ಯರಾತ್ರಿ 12 ಗಂಟೆಯವರೆಗೂ ಜರುಗಿತು. ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಜರುಗಿತು.
ಈ ಬಾರಿಯ ಹುಂಡಿ ಎಣಿಕೆಯಲ್ಲಿ 2,21,32,439 (ಎರಡು ಕೋಟಿ ಇಪ್ಪತ್ತೊಂದು ಲಕ್ಷದ ಮೂವತ್ತೆರೆಡು ಸಾವಿರದ ನಾಲ್ಕುನೂರ ಮೂವತ್ತ ಒಂಭತ್ತು)ರೂ ನಗದು, 40ಗ್ರಾಂ ಚಿನ್ನದ ಪದಾರ್ಥಗಳು, 1ಕೆಜಿ 650ಗ್ರಾಂ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿವೆ.
ಇದನ್ನೂ ಓದಿ:ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದ ಮೂವರ ಬಂಧನ: 2 ನಾಡಬಂದೂಕು, ಮುದ್ದುಗುಂಡು ವಶ
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಯಥಾಸ್ಥಿತಿಯತ್ತ ಆದಾಯ: ದೇಶದೆಲ್ಲೆಡೆ ಕೊರೋನಾ ಮಹಾಮಾರಿ ಹಿನ್ನೆಲೆ ಮಲೆ ಮಾದಪ್ಪನ ಹುಂಡಿ ಸಂಗ್ರಹಣೆಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ಗಣನೀಯ ಕುಸಿತವಾಗಿತ್ತು. ಇದೀಗ ಕಳೆದ 54 ದಿನಗಳ ಅವಧಿಯಲ್ಲಿ 2.21 ಕೋಟಿ ಸಂಗ್ರಹವಾಗಿದ್ದು ಹುಂಡಿ ಆದಾಯ ಚೇತರಿಕೆಯಲ್ಲಿದೆ. ಅಲ್ಲದೆ ನವೆಂಬರ್ 1 ರಿಂದ ಕೆಲ ನಿರ್ಬಂಧಗಳನ್ನು ಸಡಿಲಿಸಿ ರಾತ್ರಿ ತಂಗುವಿಕೆ, ಮುಡಿ ಸೇವೆ, ದರ್ಶನದ ಸಮಯ ವಿಸ್ತರಣೆ, ಬಂಗಾರದ ರಥೋತ್ಸವ, ವಾಹನೋತ್ಸವ ಸೇವೆಗಳು ಆರಂಭವಾಗಿರುವುದರಿಂದ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಿದ್ದು ಆದಾಯ ಮತ್ತಷ್ಟು ಚೇತರಿಕೆಯ ಹಾದಿಯಲ್ಲಿದೆ.