ನವದೆಹಲಿ:ದ್ವೀಪರಾಷ್ಟ್ರ ಮಾಲ್ಡೀವ್ಸ್(Maldivs) ನಿಂದ ಭಾರತದ ಭದ್ರತೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಮಾಲ್ಡೀವ್ಸ್ ಗೆ ಭಾರತದ ನೆರವು, ರಕ್ಷಣೆ ಬೇಕಾಗಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು(Mohammad Muizzu) ತಿಳಿಸಿದ್ದಾರೆ.
ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಅವರ ಮೊದಲ ಅಧಿಕೃತ ಭೇಟಿ ಇದಾಗಿದೆ. ಇದಕ್ಕೂ ಮೊದಲು ಮೊಯಿಜ್ಜು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ್ದರು.
“ಭಾರತ ನಮ್ಮ ರಕ್ಷಣೆಯ ದೇಶವಾಗಿದೆ. ಭಾರತ ಮಾಲ್ಡೀವ್ಸ್ ನ ಪ್ರಮುಖ ಪಾರ್ಟನರ್ ದೇಶವಾಗಿದೆ. ಉಭಯ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ” ಎಂದು ಮುಯಿಜ್ಜು ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನವದೆಹಲಿಯಲ್ಲಿರುವ ಹೈದರಾಬಾದ್ ಹೌಸ್ ನಲ್ಲಿ ಸೋಮವಾರ (ಅ.07) ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮುಯಿಜ್ಜು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಮುಯಿಜ್ಜುಗೆ ಆತಿಥ್ಯ ನೀಡಲಾಗಿತ್ತು.
ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ಹಾಗೂ ಪ್ರಥಮ ಮಹಿಳೆ ಸಾಜಿದಾ ಮೊಹಮ್ಮದ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿ, ಬರಮಾಡಿಕೊಂಡಿದ್ದರು.