Advertisement

ಗಂಧದ ನಾಡಿನ ಚಂದದ ಸೀರೆ

01:46 PM Oct 22, 2020 | mahesh |

ಕರ್ನಾಟಕದಲ್ಲೇ ಅಧಿಕವಾಗಿ, ದೇಶದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುವ “ಮಲ್‌ಬರಿ ಸಿಲ್ಕ್’ನ ಸೊಬಗೇ ಮೈಸೂರು ಸಿಲ್ಕ್ ಸೀರೆಯ ಗರಿಮೆ!

Advertisement

ಗಂಧದ ನಾಡು ಚಂದದ ನಾಡು ಕರ್ನಾಟಕದ ಮೈಸೂರು ಸಿಲ್ಕ್ ವಿಶ್ವಾದ್ಯಂತ ತಲುಪಿರುವುದಕ್ಕೆ ಕಾರಣಗಳೇನು, ಅದರ ವೈಶಿಷ್ಟ್ಯವೇನು ಎಂಬತ್ತ ಒಂದು ಕಿರುನೋಟ ಇಲ್ಲಿದೆ.
ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್‌ ಕಾರ್ಪೊರೇಶನ್‌ ಟ್ರೇಡ್‌ ಮಾರ್ಕ್‌ನೊಂದಿಗೆ, ಶುದ್ಧ ರೇಶಿಮೆಯ ಮೈಸೂರು ಸಿಲ್ಕ್ ಸೀರೆ ತಯಾರಾಗುತ್ತದೆ. ಇದರಲ್ಲಿ 100 ಪ್ರತಿಶತ ಶುದ್ಧ ಚಿನ್ನದ ಜರಿಯನ್ನು, 65 ಪ್ರತಿಶತ ಬೆಳ್ಳಿಯ ಜರಿಯನ್ನು ಬಳಸಲಾಗುತ್ತದೆ. ದುಬಾರಿ ಬೆಲೆಬಾಳುವ ವಿಶೇಷ ಮೆರುಗಿನ ಮೈಸೂರು ಸಿಲ್ಕ್ ಸೀರೆಗಳು 0.65 ಪ್ರತಿಶತ ಶುದ್ಧ ಚಿನ್ನದಿಂದ ತಯಾರಾಗುತ್ತದೆ.

ಮಹಾರಾಜಾ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬ್ರಿಟನ್‌ಗೆ ವಿಕ್ಟೋರಿಯಾ ರಾಣಿಯ ಆಮಂತ್ರಣದ ಮೇರೆಗೆ ತಲುಪಿದಾಗ ಅಲ್ಲಿನ ರಾಜಮನೆತನದ “ರಾಯಲ್‌ ಸಿಲ್ಕ್’ನ ಆಕರ್ಷಣೆಯನ್ನು ಮೆಚ್ಚಿ, ಅಲ್ಲಿಂದ 32 ಯಾಂತ್ರೀಕೃತ ಕೈಮಗ್ಗ (ಆಧುನಿಕ ವಿನ್ಯಾಸಗಳೊಂದಿಗಿನ) ಆಮದು ಮಾಡಿದರು.

ಆಕರ್ಷಕ ಹಾಗೂ ದುಬಾರಿ ಬೆಲೆಯ ರಾಜಮನೆತನದವರಿಗಾಗಿಯೇ ತಯಾರಾದ ಮೈಸೂರು-ರೇಶಿಮೆಯ ಸೀರೆ ಇಂದಿಗೂ ಅದೇ ನಾವೀನ್ಯತೆ ಹಾಗೂ ಹೊಳಪಿನ ಸೊಬಗಿನೊಂದಿಗೆ ಸಂಗ್ರಹಾಲಯದಲ್ಲಿ, ವೀಕ್ಷಕರ ಕಣ್ಮನ ಸೆಳೆಯುತ್ತಿದೆ.

ಆಧುನಿಕತೆಯೊಂದಿಗೆ ಕೆಲವು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಆಧುನಿಕ ಮೈಸೂರು ಸಿಲ್ಕ್ ಸೀರೆ ಎಲ್ಲಾ ವರ್ಗದವರಿಗೂ ತಲುಪುವಂತೆ ಕ್ರೇಪ್‌, ಜಾರ್ಜೆಟ್‌, ಜರಿ ಪ್ರಿಂಟ್‌ ಹೊಂದಿರುವ ಕ್ರೇಪ್‌ ಸಿಲ್ಕ್ ಸೀರೆ ಸೆಮಿ ಕ್ರೇಪ್‌ ಸಿಲ್ಕ್ ಸೀರೆ ಇತ್ಯಾದಿಗಳೊಂದಿಗೆ ವೈವಿಧ್ಯಮಯವಾಗಿ ತಯಾರಾಗುತ್ತಿದೆ.

Advertisement

ಇಂದು 300ಕ್ಕೂ ಅಧಿಕ ವಿವಿಧ ಬಣ್ಣಗಳೊಂದಿಗೆ 115 ವಿವಿಧ ವಿನ್ಯಾಸಗಳೊಂದಿಗೆ ವಿವಿಧ ಮೈಸೂರು ಸಿಲ್ಕ್ ಸೀರೆಗಳ ಆಧುನಿಕ ಲೋಕವೇ ವಿಶ್ವಕ್ಕೆ ತೆರೆದುಕೊಂಡಿದೆ.

ಕ್ರಿ.ಶ. 1912ರಿಂದ 2012ರವರೆಗೆ 100 ವರ್ಷದ ವೈಭವದೊಂದಿಗೆ ಇನ್ನೂ ಮೈಸೂರು ಸಿಲ್ಕ್ ಪ್ರಾಚೀನ ಸಾಂಪ್ರದಾಯಿಕ ಮೆರುಗಿನೊಂದಿಗೆ, ಆಧುನಿಕತೆಯ ವೈವಿಧ್ಯತೆಯನ್ನು ಒಡಮೂಡಿಸಿಕೊಂಡಿದ್ದು ಜನಪ್ರಿಯತೆಯನ್ನು ಪಡೆಯುತ್ತಿದೆ. KSIC ಯು “ಫ್ಯಾಶನ್‌ ಲೇಬಲ್‌’ ಎಂಬ ವಿಶಿಷ್ಟ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ಉಲ್ಲೇಖನೀಯ. ಇದರಲ್ಲಿ ನ್ಯಾನೋ ಟೆಕ್ನಾಲಜಿ, ಹಾಟ್‌ಪ್ರಸ್‌ ಎಂಬ ವಿಶೇಷತೆಯನ್ನು ಅಳವಡಿಸಿಕೊಂಡಿದೆ. ಭಾರತದ ಯೂನಿಯನ್‌ ಮಿನಿಸ್ಟ್ರಿ ಆಫ್ ಟೆಕ್ಸ್‌ ಟೈಲ್‌ ಇದಕ್ಕೆ ಪೂರಕವಾಗಿ ಬಲನೀಡಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೆ ಎಲ್ಲೆಡೆ ಹಬ್ಬಹರಿದಿನ ಸಮಾರಂಭಗಳಿಗೆ ಉಡಲೂ ಆಕರ್ಷಕವಾಗಿರುವ, ಸರಳವಾಗಿರುವ ಆದರೆ ವಿಶೇಷ “ಲುಕ್‌’ ನೀಡುವ ಸೀರೆ ಮೈಸೂರು ಸಿಲ್ಕ್. ಇತ್ತೀಚೆಗೆ “ಕ್ಯಾನ್ಸ್‌ ಫಿಲ್ಮ್ ಫೆಸ್ಟಿವಲ್‌’ ಫ್ರಾನ್ಸ್‌ ನಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಮೈಸೂರು ಸಿಲ್ಕ್ನ ವೈಭವ ಉಡುಗೆಯೊಂದಿಗೆ ಸಾಂಪ್ರದಾಯಿಕತೆಯ ಮೆರುಗನ್ನು ಹೆಚ್ಚಿಸಿದರು. ಇನ್ನೊಂದು ವೈಶಿಷ್ಟéವೆಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸಮಾರಂಭ, ಸಭೆ, ಮದುವೆಯಂಥ ಸಂದರ್ಭಗಳಲ್ಲೂ ಮೈಸೂರು ಸೀರೆ ವಿಶೇಷವಾಗಿ ಉಡಲ್ಪಡುತ್ತದೆ.

ಆಧುನಿಕ ಉಡುಗೆ-ತೊಡುಗೆಯಾದ ಸಲ್ವಾರ್‌ ಕಮೀಜ್‌ ಹಾಗೂ ಚೂಡಿದಾರ್‌ ಇತ್ಯಾದಿಗಳಿಗೂ ಇಂದು ಮೈಸೂರು ಸಿಲ್ಕ್ ನ ಫ್ಯಾಬ್ರಿಕ್‌ ಬಳಕೆ ಜನಪ್ರಿಯವಾಗುತ್ತಿದೆ. ಪ್ರಾಚೀನ ಕಾಲದಲ್ಲಿ ಲಂಗ, ದಾವಣಿ ತೊಡುವಂತೆ ಇಂದಿಗೂ ಪುಟ್ಟ ಮಕ್ಕಳಿಗೆ ಮದುವೆ, ಮುಂಜಿ ಹಬ್ಬಗಳಲ್ಲಿ ಲಂಗದಾವಣಿ, ಫ್ರಾಕ್‌ ವಿನ್ಯಾಸದ ಉಡುಗೆಗಳು ಜನಪ್ರಿಯತೆಯನ್ನು ಉಳಿಸಿಕೊಂಡಿವೆ.

ಇತರ ವಸ್ತ್ರವಿನ್ಯಾಸದ ಮೈಸೂರು ಸಿಲ್ಕ್ ಆ್ಯಕ್ಸೆಸರೀಸ್‌ ಕೂಡ ಇಂದಿನ ಆಧುನಿಕ ಆವಿಷ್ಕಾರಗಳಾಗಿವೆ. ಹೀಗೆ ಕರ್ನಾಟಕದ ಸಾಂಪ್ರದಾಯಕ ಉಡುಗೆಯಾಗಿ ಜಗದ್ವಿಖ್ಯಾತವಾದ ಮೈಸೂರು ಸಿಲ್ಕ್ ಸೀರೆಯೊಂದಿಗೆ, ಮೈಸೂರು ಮಲ್ಲಿಗೆಯಂತೆ, ಮೈಸೂರಿನ ಹೆಸರಿನ ಕಂಪು ಎಲ್ಲೆಡೆ ಪಸರಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next