Advertisement

ಮಲೇಶ್ಯಾ ಮರಳು ಕೊನೆಗೂ ವಿಲೇವಾರಿ!

12:20 AM Aug 09, 2021 | Team Udayavani |

ಮಂಗಳೂರು: ರಾಜ್ಯದಲ್ಲಿ ಮರಳು ಕೊರತೆ ನೀಗಿಸಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನವಮಂಗಳೂರು ಬಂದರಿಗೆ ತರಿಸಿ ದಾಸ್ತಾನಿರಿಸಿದ್ದ ಮಲೇಶ್ಯಾ ಮರಳಿಗೆ ಕೊನೆಗೂ ಮೂರೂವರೆ ವರ್ಷಗಳ ಬಳಿಕ ವಿಲೇವಾರಿ ಭಾಗ್ಯ ಲಭಿಸಿದೆ!

Advertisement

ಎರಡು ಖಾಸಗಿ ಸಂಸ್ಥೆಗಳ ಮೂಲಕ ವಿಲೇವಾರಿ ಮಾಡುವುದೆಂಬ ಮಾತುಕತೆಯೊಂದಿಗೆ 2017ರ ಡಿಸೆಂಬರ್‌ ಹಾಗೂ 2018ರ ಆರಂಭದಲ್ಲಿ ಮಲೇಶ್ಯಾದಿಂದ ಮಂಗಳೂರಿಗೆ 3 ಹಡಗುಗಳಲ್ಲಿ ಮರಳು ಆಮದು ಮಾಡಿ ಶೇಖರಿಸಿಡಲಾಗಿತ್ತು. ಆ ಬಳಿಕ ಸರಕಾರದಿಂದ ಅನುಮತಿ ದೊರೆಯದ ಕಾರಣ 3 ವರ್ಷ ಸಂದರೂ ಸಾಗಾಟ ಆಗಿರಲಿಲ್ಲ. ಈ ವಿಚಾರದಲ್ಲಿ ಸರಕಾರ ಮತ್ತು ಕಂಪೆನಿಯ ಮಧ್ಯೆ ತಿಕ್ಕಾಟ ನಡೆದು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ನ್ಯಾಯಾಲಯ ಒಂದು ಸಂಸ್ಥೆಯ ಅರ್ಜಿ ಇತ್ಯರ್ಥಗೊಳಿಸಿ ಸಾಗಾಟಕ್ಕೆ ಅನುಮತಿ ನೀಡಿದೆ. ಮತ್ತೂಂದು ಸಂಸ್ಥೆಯ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ಮಾಸಿಕ 12 ಲಕ್ಷ ರೂ. ಬಾಡಿಗೆ!

ಕೆಲವು ತೊಡಕುಗಳ ಕಾರಣ ಮರಳಿನ ಸಾಗಾಟಕ್ಕೆ ರಾಜ್ಯ ಗಣಿ ಇಲಾಖೆ ಅನುಮತಿಸಿರಲಿಲ್ಲ. ಆದರೆ ದಾಸ್ತಾನು ಮಾಡಿರುವ ಮರಳಿಗೆ ಎನ್‌ಎಂಪಿಟಿಗೆ ಪ್ರತೀ ತಿಂಗಳು 12 ಲಕ್ಷ ರೂ. ಬಾಡಿಗೆ ಪಾವತಿಸಬೇಕಿರುವುದು ಗುತ್ತಿಗೆ ಸಂಸ್ಥೆಗಳಿಗೆ ಹೊರೆಯಾಗಿತ್ತು.

ಸ್ಥಳೀಯವಾಗಿ ಬೇಡಿಕೆ ಇಲ್ಲ:

Advertisement

ಮಲೇಶ್ಯಾ ಮರಳಿನ ಗುಣಮಟ್ಟ ಸ್ಥಳೀಯ ಮರಳಿನಷ್ಟಿಲ್ಲ. ಜತೆಗೆ ಕರಾವಳಿಯಲ್ಲಿ ಮರಳು ಅಗತ್ಯ ದೊರೆಯುವ ಕಾರಣ ಮಲೇಶ್ಯಾ ಮರಳಿಗೆ ಬೇಡಿಕೆ ಇಲ್ಲ. ಆದ್ದರಿಂದ ಸದ್ಯ ಬೇರೆ ಜಿಲ್ಲೆಗೆ ಸಾಗಿಸಲಾಗುತ್ತಿದೆ. ಬಹುಬೇಡಿಕೆ ಇಲ್ಲದಿದ್ದರೂ ಕೊಂಚ ಪ್ರಮಾಣದಲ್ಲಿ ಸಾಗಾಟ ನಡೆಯುತ್ತಿದೆ.

150 ಸಾವಿರ ಮೆಟ್ರಿಕ್‌ ಟನ್‌ :

ಮಲೇಶ್ಯಾದಿಂದ 2017ರ ಡಿ. 5ರಂದು 52 ಸಾವಿರ ಮೆಟ್ರಿಕ್‌ ಟನ್‌, 2018ರಲ್ಲಿ ಮತ್ತೆರಡು ಹಡಗುಗಳಲ್ಲಿ ಮರಳು ಬಂದಿತ್ತು. ಎರಡನೇ ಹಡಗಿನಲ್ಲಿ 48 ಸಾವಿರ ಮೆಟ್ರಿಕ್‌ ಟನ್‌ ಹಾಗೂ ಮೂರನೇ ಹಡಗಿನಲ್ಲಿ ಅಂದಾಜು 50 ಸಾವಿರ ಮೆಟ್ರಿಕ್‌ ಟನ್‌ ಮರಳು ಸೇರಿದಂತೆ ಒಟ್ಟು 150 ಸಾವಿರ ಮೆಟ್ರಿಕ್‌ ಟನ್‌ ಆಮದಾಗಿತ್ತು. ಇದರಲ್ಲಿ ಕೆಲವು ಸಾವಿರ ಮೆಟ್ರಿಕ್‌ ಟನ್‌ ಈಗಾಗಲೇ ಮಾರಾಟವಾಗಿದ್ದು, ಹೊರ ಜಿಲ್ಲೆ/ರಾಜ್ಯಗಳಿಂದ ಬೇಡಿಕೆ ಬರಲಾರಂಭಿಸಿದೆ.

ಎನ್‌ಎಂಪಿಟಿ ಯಾರ್ಡ್‌ ನಲ್ಲಿ ಶೇಖರಿಸಲ್ಪಟ್ಟ ಮಲೇಶ್ಯಾ ಮರಳು ಸಾಗಾಟಕ್ಕೆ ನ್ಯಾಯಾಲಯದ ಆದೇಶದಂತೆ ಅನುಮತಿ ನೀಡಲಾಗಿದೆ. ಗಣಿ ಇಲಾಖೆಯ ಅನುಮತಿಯ ಮೂಲಕ ಹೊರಜಿಲ್ಲೆ ಹಾಗೂ ಕೇರಳ ಸೇರಿದಂತೆ ಹೊರರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ.ನಿರಂಜನ್‌, ಉಪನಿರ್ದೇಶಕರು, ಗಣಿ ಇಲಾಖೆ, ದ.ಕ.

 

Advertisement

Udayavani is now on Telegram. Click here to join our channel and stay updated with the latest news.

Next