ಕೌಲಾಲಂಪುರ: ಅಚ್ಚರಿಯ ಬೆಳವಣಿಗೆಯಲ್ಲಿ, ಮಲೇಷ್ಯಾ ಪ್ರಧಾನಿ ಮಹತೀರ್ ಮೊಹಮ್ಮದ್ ಸೋಮವಾರ ಏಕಾಏಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜಕೀಯ ಮಿತ್ರರೇ ಸರ್ಕಾರವನ್ನು ಉರುಳಿಸಿ, ಅನ್ವರ್ ಇಬ್ರಾಹಿಂರನ್ನು ಪ್ರಧಾನಿ ಹುದ್ದೆಗೇರಿಸಲು ಯತ್ನಿಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದ್ದು, ಮಲೇಷ್ಯಾದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. 2018ರ ಚುನಾವಣೆ ವೇಳೆ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಮಹತೀರ್ ಮತ್ತು ಅನ್ವರ್ ಪರಸ್ಪರ ಕೈಜೋಡಿಸಿ “ಪ್ಯಾಕ್ಟ್ ಆಫ್ ಹೋಪ್’ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದರು. ಅಲ್ಲದೆ, ತಮ್ಮ ನಂತರ ಅನ್ವರ್‌ರನ್ನೇ ಪ್ರಧಾನಿ ಹುದ್ದೆಗೇರಿಸುವ ಆಶ್ವಾಸನೆಯನ್ನೂ ನೀಡಿದ್ದರು. ಆದರೆ ಪಕ್ಷದೊಳಗೆ ಕೆಲವರಿಗೆ ಅನ್ವರ್ ಪ್ರಧಾನಿಯಾಗುವುದು ಇಷ್ಟವಿರಲಿಲ್ಲ. ಹೀಗಾಗಿ, ಅದನ್ನು ತಪ್ಪಿಸುವ ಸಲುವಾಗಿ ಸರ್ಕಾರವನ್ನೇ ಉರುಳಿಸಲು ಯತ್ನಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಮಹತೀರ್ ರಾಜೀನಾಮೆ ಸಲ್ಲಿಸಿದ್ದಾರೆ.