Advertisement
ಇದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ನೀಡಿರುವ ಮಾಹಿತಿ. ಹಿಂದಿನ ಕಾಂಗ್ರೆಸ್ ಸರಕಾರ, ರಾಜ್ಯದಲ್ಲಿನ ಮರಳು ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಅದರಂತೆ ರಾಜ್ಯದ ಕರಾವಳಿ ಸಹಿತ ವಿವಿಧೆಡೆಗಳಿಗೆ ಮರಳೂ ಬಂದಿತ್ತು. ಇದನ್ನು ಎಂಎಸ್‌ಐಎಲ್ ಮೂಲಕ ಮಾರಾಟ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಈ ಮರಳಿಗೆ ಯಾವುದೇ ರೀತಿಯಲ್ಲೂ ಬೇಡಿಕೆ ಬಂದಿಲ್ಲ ಎಂದಿರುವ ಶೆಟ್ಟರ್ ಅವರು, ಈ ಯೋಜನೆ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
Related Articles
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಮಲೇಷ್ಯಾದಿಂದ ಬಂದಿರುವ ಮರಳು ಕುರಿತಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಿದ್ದೇನೆ. ವಿದೇಶೀà ಮರಳು ಆಮದು ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಅತೀ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಸಿ ಈಗಾಗಲೇ ಬಂದಿರುವ ವಿದೇಶೀ ಮರಳು ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಲಿದ್ದೇವೆ ಎಂದು ಹೇಳಿದರು.
Advertisement
ಕರಾವಳಿ ಮರಳಿನ ಸಮಸ್ಯೆಗೆ ಪರಿಹಾರಕರಾವಳಿ ಭಾಗದ ಮರಳಿನ ಸಮಸ್ಯೆಯ ಬಗ್ಗೆ ಮಾಹಿತಿಯಿದ್ದು, ನೀತಿಯನ್ನು ಸರಳೀಕರಿಸುವ ಮೂಲಕ ಸಮಸ್ಯೆಗೆ ಜ.15ರೊಳಗೆ ಪರಿಹಾರ ನೀಡಲಿದ್ದೇವೆ ಎಂದು ಅವರು ತಿಳಿಸಿದರು. ಕರಾವಳಿ ಜಿಲ್ಲೆಗಳ ಮರಳಿನ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳ ಜತೆ ನಿರಂತರ ಸಭೆ ನಡೆಸಿದ್ದೇನೆ. ಹಾಗೆಯೇ ಗುಜರಾತ್ ಮಾದರಿಯ ಅಧ್ಯಯನಕ್ಕಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರವಾಸ ಹೋಗಿ ಬಂದಿದ್ದಾರೆ. ಆ ಭಾಗದ ಜನ ಸಾಮಾನ್ಯರಿಗೆ ಅನುಕೂಲ ಆಗುವಂತೆ ಯಾವ ರೀತಿ ನೀತಿಯನ್ನು ಸರಳೀಕರಿಸಬಹುದು ಎಂಬುದನ್ನು ಜ.15ರೊಳಗೆ ತೀರ್ಮಾನಿಸಲಿದ್ದೇವೆ ಎಂದು ಹೇಳಿದರು. ಕರಾವಳಿ ಭಾಗದ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಸ್ವಲ್ಪ ಸಮಸ್ಯೆಯಾಗಲಿದೆ. ಅದನ್ನು ಸರಿಪಡಿಸಲಿದ್ದೇವೆ. ಕರಾವಳಿ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ 5 ಎಕರೆ ಜಾಗ ಮರಳು ತೆಗೆಯಲು ಸಿಗುತ್ತದೆ. ಕರಾವಳಿಯಲ್ಲಿ ಐದು ಎಕರೆ ಕಷ್ಟ 1 ಎಕರೆ ಸಿಗುತ್ತಿದೆ, ಇದನ್ನು ಅರ್ಧ ಎಕರೆಗೆ ಇಳಿಸಬೇಕು ಎಂಬ ಅಲ್ಲಿನ ಜನರ ಮುಖ್ಯ ಬೇಡಿಕೆಯನ್ನು ಈಡೇರಿಸಿದ್ದೇವೆ. ಅರ್ಧ ಎಕರೆಗೆ ಇಳಿಸಲು ಸರಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು. ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಕರಾವಳಿ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದೇನೆ. ಪ್ರಗತಿ ಪರಿಶೀಲನ ಸಭೆ ನಡೆಸಲಿದ್ದೇನೆ. ಅಲ್ಲಿ ಬಹುತೇಕ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.