ಬೆಂಗಳೂರು: ಕನ್ನಡಿಗರೇ ಕನ್ನಡದಲ್ಲಿ ವ್ಯವಹರಿಸಲು ಹಿಂಜರಿಯುವ ದಿನಗಳದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಮಲೇಷಿಯಾದಿಂದ ಕರ್ನಾಟಕಕ್ಕೆ ಬಂದ ವಿದ್ಯಾರ್ಥಿಯೊಬ್ಬ ಪದವಿ ಮುಗಿಯುವುದರೊಳಗೇ ಕನ್ನಡ ಕಲಿತು, ರೋಗಿಗಳೊಂದಿಗೆ ಕನ್ನಡದಲ್ಲೇ ವ್ಯವಹರಿಸಲು ಆರಂಭಿಸಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಮಲೇಷಿಯಾ ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆದು ದಾವಣಗೆರೆ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಪದವಿಯನ್ನು ನಾಲ್ಕು ಚಿನ್ನದ ಪದಕಗಳೊಂದಿಗೆ ಪೂರೈಸಿರುವ ಡಾ.ಲಿಮ್ ಬೂನ್ ಹ್ಯೂ, ಈಗಾಗಲೇ ಒಂದು ವರ್ಷದ ಇಂಟರ್ನ್ಶಿಪ್ ಕೂಡ ಪೂರ್ಣಗೊಳಿಸಿದ್ದಾರೆ. ಅಧ್ಯಯನದ ಸಂದರ್ಭದಲ್ಲಿಯೇ ರೋಗಿಗಳೊಂದಿಗೆ ವ್ಯವಹರಿಸಲು ಅಗತ್ಯವಿರುವಷ್ಟು ಕನ್ನಡವನ್ನು ಅಧ್ಯಯನದ ಮೂಲಕ ತಿಳಿದುಕೊಂಡಿದ್ದಾರೆ. ಕನ್ನಡ ಓದುವುದು, ಬರೆಯುವುದು ಮತ್ತು ವ್ಯವಹಾರವನ್ನು ಕೂಡ ಕರಗತ ಮಾಡಿಕೊಂಡಿದ್ದಾರೆ.
ಬಿಡಿಎಸ್ ಕೋರ್ಸ್‌ನಲ್ಲಿ ಗರಿಷ್ಠ ಅಂಕ, ರೆಡಿಯಾಲಜಿ ಮತ್ತು ಮೆಡಿಸಿನ್‌ನಲ್ಲಿ ಗರಿಷ್ಠ ಅಂಕ, ಪೆಡೋಡಾಂಟಿಕ್ಸ್‌ನಲ್ಲಿ ಗರಿಷ್ಠ ಅಂಕ ಹಾಗೂ ದಂತ ವೈದ್ಯಕೀಯ ಅಂತಿಮ ವರ್ಷದಲ್ಲಿ ಎಲ್ಲಾ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದಿರುವುದಕ್ಕಾಗಿ ಗುರುವಾರ ನಗರದ ನಿಮ್ಹಾನ್ಸ್ ಸೆಂಟರ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ನಾಲ್ಕು ಚಿನ್ನದ ಪದಕ ಪಡೆದರು.
ಆಸಕ್ತಿಯ ವಿಷಯ: ನಂತರ ತಮ್ಮ ಅನುಭವ ಹಂಚಿಕೊಂಡ ಡಾ. ಲಿಮ್, ಕನ್ನಡ ಕಲಿಯುವುದೇ ಒಂದು ಆಸಕ್ತಿಯ ವಿಷಯವಾಗಿತ್ತು. ರೋಗಿಗಳನ್ನು ಆರೈಕೆ ಮಾಡಲು ಪೂರಕವಾಗುವ ಉದ್ದೇಶದಿಂದ ಕೆಲವೊಂದು ಪದ ಹಾಗೂ ಪ್ಯಾರಾಗಳನ್ನು ಉದ್ದೇಶ ಪೂರ್ವಕವಾಗಿ ವಿಶೇಷ ಒತ್ತುಕೊಟ್ಟು ಅಧ್ಯಯನ ಮಾಡಿದ್ದೇನೆ. ನೋವು ಇದೆಯಾ? ಎಲ್ಲಿ ನೋವು? ಎಷ್ಟು ದಿನದಿಂದ ಸಮಸ್ಯೆ ಇದೆ ಇತ್ಯಾದಿ ಪದಗಳು ಸ್ಥಳೀಯ ಅಥವಾ ಗ್ರಾಮೀಣ ಭಾಗದ ರೋಗಿಗಳೊಂದಿಗೆ ವ್ಯವಹರಿಸಲು ಉಪಯೋಗವಾಗಿದೆ ಎಂದರು.
ಮಲೇಷಿಯಾ ಸರ್ಕಾರ ಕೂಡ ಭಾರತದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹಿಂದಿ, ಕನ್ನಡ, ತಮಿಳು ಇತ್ಯಾದಿ ಭಾಷೆಗಳ ಅಧ್ಯಯನಕ್ಕೆ ಪೂರಕವಾಗುವಂತೆ ಅಲ್ಪಾವಧಿಯ ಕೋರ್ಸ್‌ಗಳನ್ನು ನಡೆಸುತ್ತದೆ. ಅದರಲ್ಲೂ ಭಾಗವಹಿಸಿದ್ದೇನೆ ಎಂದರು. ರಾಜ್ಯ ಸರ್ಕಾರ ಗ್ರಾಮೀಣ ಸೇವೆ ಕಡ್ಡಾಯ ಮಾಡಿರುವ ನಿರ್ಧಾರ ಚೆನ್ನಾಗಿದೆ. ಸದ್ಯ ಮಲೇಷಿಯಾದ ಸರ್ಕಾರಿ ಆಸ್ಪತ್ರೆಯ ದಂತ ಚಿಕಿತ್ಸಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.