Advertisement
ನಾವು ಎಷ್ಟು ಹೊತ್ತು ಉಸಿರಾಡದೇ ನೀರಿನಲ್ಲಿ ಮುಳುಗಬಲ್ಲೆವು? ಅಬ್ಬಬ್ಟಾ ಅಂದರೆ ಒಂದು ನಿಮಿಷ ಅಷ್ಟೇ. ಪ್ರಾಣಾಯಾಮದಂತಹ ಯೋಗಾಭ್ಯಾಸ ಮಾಡಿದ್ದರೆ ಕೆಲವು ನಿಮಿಷಗಳವರೆಗೆ ಉಸಿರು ಬಿಗಿ ಹಿಡಿಯಬಹುದು. ಅತಿ ಹೆಚ್ಚು ಹೊತ್ತು ನೀರಿನಡಿ ಮುಳುಗಬಲ್ಲ ಗುಣವನ್ನು ಅಲೆಮಾರಿ ಜನಾಂಗವೊಂದರ ಮಂದಿ ಹುಟ್ಟಿನಿಂದಲೇ ಪಡೆದುಕೊಂಡು ಬಂದಿದ್ದಾರೆ. ಪಿಲಿಪ್ಪೀನ್ಸ್, ಇಂಡೋನೇಶಿಯಾ ಮತ್ತು ಮಲೇಶಿಯಾದಲ್ಲಿ ಕಂಡುಬರುವ “ಬಜಾವು’ ಮಂದಿ ಈ ವಿಶೇಷ ಗುಣವನ್ನು ಹೊಂದಿದ್ದು ವಿಶ್ವದಲ್ಲಿ ಎಲ್ಲರಿಗೆ ಅಚ್ಚರಿ ಉಂಟು ಮಾಡಿದ್ದಾರೆ. ಇವರು 200 ಅಡಿ ಆಳದವರೆಗೂ ನೀರಿನಲ್ಲಿ ಮುಳುಗಬಲ್ಲವರಾಗಿದ್ದು, 13 ನಿಮಿಷಗಳಷ್ಟು ಹೊತ್ತು ನೀರಿನಡಿ ಉಸಿರಾಡದೆ, ಮೀನುಗಳ ಬೇಟೆಯಾಡುತ್ತಾರೆ. ಅದರ ಜೊತೆಗೆ ಕಡಲಾಳದಲ್ಲಿ ಸಿಗುವ ಮುತ್ತು, ಚಿಪ್ಪುಗಳನ್ನು ಹೊರತೆಗೆಯುತ್ತಾರೆ.
ಈ ಕುರಿತು ಅಚ್ಚರಿಗೊಂಡ ವಿಜ್ಞಾನಿಗಳು, ಸಂಶೋಧಕರು ಬಜಾವು ಜನರನ್ನು ಅಧ್ಯಯನಕ್ಕೊಳಪಡಿಸಿದರು. ಆಗ ಅನೇಕ ಆಶ್ಚರ್ಯಕಾರಿ ಮಾಹಿತಿ ಸಿಕ್ಕಿದ್ದವು. ಸಾಮಾನ್ಯ ಜನರಿಗೆ ಹೋಲಿಸಿದರೆ ಬಜಾವು ಬುಡಕಟ್ಟಿನ ಮಂದಿ ಸುಮಾರು ಒಂದೂವರೆ ಪಟ್ಟು ದೊಡ್ಡದಾದ ತೊರಳೆ (spleen) ಹೊಂದಿದ್ದು, ಇದರಿಂದಾಗಿಯೇ ನೀರಿನಲ್ಲಿ ಹೆಚ್ಚು ಹೊತ್ತು ಮುಳುಗಬಲ್ಲವರಾಗಿದ್ದಾರೆ ಎಂಬುದು ಕೆಲ ಸಂಶೋಧನೆಗಳಿಂದ ತಿಳಿದುಬಂದಿದೆ. ಈ ತೊರಳೆಗಳ ಬಹುಮುಖ್ಯ ಕೆಲಸ, ಕೆಂಪು ನೆತ್ತರ ಕಣಗಳನ್ನು ಹುಟ್ಟುಹಾಕುವುದು ಮತ್ತು ಉಸಿರು ಕಟ್ಟದಂತೆ ತಡೆಯುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆ ಮೂಲಕವೇ ಬಜಾವು ಮನುಷ್ಯ ನೀರಿನ ಒಳಗೆ ಜಾಸ್ತಿ ಹೊತ್ತು ಉಸಿರಾಡದೇ ಇರಬಲ್ಲ ಎನ್ನುವುದು ಹಲವರ ವಾದ. ನೀರಿನಡಿ ಬದುಕುವ ಬಹುತೇಕ ಪ್ರಾಣಿಗಳು ಸಹ ದೊಡ್ಡ ಸ್ಪ್ಲೀನ್ ಹೊಂದಿರುತ್ತದೆ.