Advertisement

Malaysia Open:ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಫೈನಲಿಗೆ

11:43 PM Jan 11, 2024 | Team Udayavani |

ಕೌಲಾಲಂಪುರ: ಭಾರತದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರ ಅಮೋಘ ಗೆಲುವು ಸಾಧಿಸಿ ಮಲೇಶ್ಯ ಓಪನ್‌ ಸೂದರ್‌ 1000 ಬ್ಯಾಡ್ಮಿಂಟನ್‌ ಕೂಟದ ಡಬಲ್ಸ್‌ ನಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ. ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ದ್ವಿತೀಯ ಸುತ್ತಿನಲ್ಲಿಯೇ ಸೋತು ಹೊರಬಿದ್ದರು.

Advertisement

ವಿಶ್ವದ ಎರಡನೇ ರ್‍ಯಾಂಕಿನ ಸಾತ್ವಿಕ್‌-ಚಿರಾಗ್‌ ಅವರು ಫ್ರಾನ್ಸ್‌ನ ಲುಕಾಸ್‌ ಕೋರ್ವಿ ಮತ್ತು ರೋನನ್‌ ಲ್ಯಾಬರ್‌ ಅವರನ್ನು 21-11, 21-18 ಗೇಮ್‌ಗಳಿಂದ ಉರುಳಿಸಿ ಅಂತಿಮ ಎಂಟರ ಸುತ್ತಿಗೇರಿದರು. ಅಲ್ಲಿ ಅವರಿಬ್ಬರು ಚೀನದ ವಿಶ್ವದ 32ನೇ ರ್‍ಯಾಂಕಿನ ಹಿ ಜಿ ಟಿಂಗ್‌ ಮತ್ತು ರೆನ್‌ ಕ್ಸಿಯಾಂಗ್‌ ಯು ಅವರ ಸವಾಲನ್ನು ಎದುರಿಸಲಿದ್ದಾರೆ. ಸಾತ್ವಿಕ್‌-ಚಿರಾಗ್‌ ಅವರು 2023ರ ವರ್ಷದಲ್ಲಿ ಆರು ಪ್ರಶಸ್ತಿ ಗೆದ್ದು ಶ್ರೇಷ್ಠ ನಿರ್ವಹಣೆ ದಾಖಲಿಸಿದ್ದರು.

ಆದರೆ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಹೋರಾಟ ದ್ವಿತೀಯ ಸುತ್ತಿನಲ್ಲಿಯೇ ಅಂತ್ಯಗೊಂಡಿತು. ಅವರು ಹಾಂಕಾಂಗ್‌ನ ಕಾ ಲಾಂಗ್‌ ಆ್ಯಂಗಸ್‌ ಅವರ ಸವಾಲನ್ನು ಎದುರಿಸಲು ವಿಫ‌ಲವಾಗಿ 13-21, 17-21 ಗೇಮ್‌ಗಳಿಂದ ಶರಣಾದರು.
ಏಷ್ಯನ್‌ ಗೇಮ್ಸ್‌ನ ಚಿನ್ನ ವಿಜೇತರಾಗಿದ್ದ ಸಾತ್ವಿಕ್‌-ಚಿರಾಗ್‌ ಆರಂಭದಲ್ಲಿಯೇ ಅಕ್ರಮಣಕಾರಿಯಾಗಿ ಆಡಿ 11-2 ಮುನ್ನಡೆ ಗಳಿಸಿಕೊಂಡಿದ್ದರು. ಈ ಹಂತದಲ್ಲಿ ಲುಕಾಸ್‌-ಲ್ಯಾಬರ್‌ ಅವರು ಸತತ ಏಳಂಕ ಪಡೆದು ತಿರುಗೇಟು ನೀಡಿದರು. ಇದರಿಂದ ಯಾವುದೇ ಒತ್ತಡಕ್ಕೆ ಒಳಗಾಗದ ಸಾತ್ವಿಕ್‌-ಚಿರಾಗ್‌ ಆಬಳಿಕ ಉತ್ತಮವಾಗಿ ಆಡಿ ಏಳಂಕ ಪಡೆದು ಗೇಮ್‌ ಗೆದ್ದರು.

ಅಶ್ವಿ‌ನಿ-ತನಿಷಾ ಮುನ್ನಡೆ
ವನಿತೆಯರ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ತೊ ಅವರು ಜಪಾನಿನ ಏಳನೇ ಶ್ರೇಯಾಂಕದ ವಕಾನಾ ನಾಗಹಾರ ಮತ್ತು ಮಾಯು ಮಾಟ್ಸುಮೊಟೊ ಅವರನ್ನು 21-19, 13-21, 21-15 ಗೇಮ್‌ಗಳಿಂದ ಕೆಡಹಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದರು. àಈ ಅಮೋಘ ಸಾಧನೆಯಿಂದ ಅಶ್ವಿ‌ನಿ-ತನಿಷಾ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಸಾಧ್ಯತೆಯನ್ನು ಹೆಚ್ಚಿಸಿ ಕೊಂಡರು. ಅಶ್ವಿ‌ನಿ-ತನಿಷಾ ಕಳೆದ ತಿಂಗಳು ಗುವಾಹಾಟಿ ಮಾಸ್ಟರ್ ಸೂಪರ್‌ 100 ಕೂಟದ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next