ಕೌಲಾಲಂಪುರ: ಗಾಯದ ಸಮಸ್ಯೆಯಿಂದ ದೀರ್ಘ ಸಮಯದ ವಿಶ್ರಾಂತಿಯ ಬಳಿಕ ಸ್ಪರ್ಧೆಗೆ ಮರಳಿದ್ದ ಪಿ.ವಿ. ಸಿಂಧು ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಕೂಟದ ಮೊದಲ ಸುತ್ತಿನ ಹೋರಾಟದಲ್ಲಿಯೇ ಎಡವಿದ್ದಾರೆ. ಆದರೆ ಉತ್ತಮ ಫಾರ್ಮ್ ನಲ್ಲಿರುವ ಎಚ್. ಎಸ್. ಪ್ರಣಯ್ ತನ್ನ ದೇಶದವರೇ ಆದ ಲಕ್ಷ್ಯ ಸೇನ್ ಅವರನ್ನು 3 ಗೇಮ್‌ಗಳ ಕಠಿನ ಹೋರಾಟದಲ್ಲಿ ಕೆಡಹಿ ಮುನ್ನಡೆ ಸಾಧಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಬಳಿಕ ಗಾಯಕ್ಕೆ ಒಳಗಾದ ಬಳಿಕ ಇದೇ ಮೊದಲ ಬಾರಿ ಆಡಿದ ಆರನೇ ಶ್ರೇಯಾಂಕದ ಸಿಂಧು 59 ನಿಮಿಷಗಳ ಹೋರಾಟದಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಕೈಯಲ್ಲಿ 12-21, 21-10, 15-21 ಗೇಮ್‌ಗಳಿಂದ ಶರಣಾದರು.
ಈ ಮೊದಲು ವಿಶ್ವದ ಎಂಟನೇ ರ್‍ಯಾಂಕಿನ ಪ್ರಣಯ್ ನಿರೀಕ್ಷಿತ ನಿರ್ವಹಣೆ ನೀಡಿ ಲಕ್ಷ್ಯ ಸೇನ್ ಅವರನ್ನು 22-24, 21-12, 21-18 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು. ಕೇರಳ ಮೂಲದ ಅವರು ಮುಂದಿನ ಸುತ್ತಿನಲ್ಲಿ ಇಂಡೋನೇಶ್ಯದ ಚಿಕೊ ಔರಾ ದ್ವಿ ವಾರ್ಡೊಯೊ ಅವರನ್ನು ಎದುರಿಸಲಿದ್ದಾರೆ.
ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಕೊರಿಯದ ಚೋಯಿ ಸೋಲ್ ಗ್ಯು ಮತ್ತು ಕಿಮ್ ವೋನ್ ಹೊ ಅವರನ್ನು 21-16, 21-13 ಗೇಮ್‌ಗಳಿಂದ ಸೋಲಿಸಿ ಪ್ರಿ-ಕ್ವಾರ್ಟರ್‌ಫೈನಲಿಗೇರಿದರು. ಮುಂದಿನ ಸುತ್ತಿನಲ್ಲಿ ಅವರು ಇಂಡೋನೇಶ್ಯದ ಮುಹಮ್ಮದ್ ಶೊಹಿಮುಲ್ ಫಿಕ್ರಿ ಮತ್ತು ಬಗಸ್ ಮೌಲಾನ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಮಾಳವಿಕಾ ಬನ್ಸೂದ್ ಅವರು ಮೊದಲ ಸುತ್ತು ದಾಟಲು ವಿಫಲರಾದರು. ಅವರು ದ್ವಿತೀಯ ಶ್ರೇಯಾಂಕದ ಕೊರಿಯದ ಆ್ಯನ್ ಸೆ ಯಂಗ್ ಅವರ ಕೈಯಲ್ಲಿ 9-21, 12-21 ಗೇಮ್‌ಗಳಿಂದ ಸೋತು ಹೊರಬಿದ್ದರು. ವನಿತೆಯರ ಡಬಲ್ಸ್‌ನಲ್ಲಿ ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ ಕೂಡ ನೇರ ಗೇಮ್‌ಗಳಿಂದ ಸೋತು ಹೊರಬಿದ್ದಿದ್ದಾರೆ.