ಕೌಲಾಲಂಪುರ: ಮಲೇಷ್ಯಾದಲ್ಲಿ ಗುರುವಾರ ಹೆಚ್ಚಿನ ಕೋವಿಡ್ ಪ್ರಕರಣಗಳು ವಲಸಿಗರನ್ನು ಬಂಧಿಸಿಟ್ಟಿರುವ ಕೇಂದ್ರವೊಂದರಿಂದ ವರದಿಯಾಗಿದೆ. ಈ ತಿಂಗಳು ಲಾಕ್‌ಡೌನ್ ವೇಳೆ ವಿವಿಧ ಪ್ರದೇಶಗಳಿಂದ ವಶಕ್ಕೆ ಪಡೆಯಲಾಗಿದ್ದ ದಾಖಲೆಪತ್ರರಹಿತ ವಲಸಿಗರನ್ನು ಈ ಕೇಂದ್ರದಲ್ಲಿ ಕೂಡಿಹಾಕಲಾಗಿದೆ.
ಹೊಸದಾಗಿ 50 ಕೋವಿಡ್ ಕೇಸುಗಳು ಪತ್ತೆಯಾಗಿದ್ದು, ಈ ಪೈಕಿ 35 ಕೇಸುಗಳು ಕೌಲಾಲಂಪುರದ ಹೊರವಲಯದಲ್ಲಿರುವ ಬುಕಿತ್ ಜಲೀಲ್ ವಲಸಿಗ ಬಂಧನ
ಕೇಂದ್ರದಿಂದ ವರದಿಯಾಗಿವೆ.ಸರಕಾರದ ಕ್ರಮ ವಲಸಿಗ ಸಮುದಾಯದಲ್ಲಿ ಭೀತಿಯನ್ನು ನಿರ್ಮಿಸಿದೆಯೆಂದು ವಿಶ್ವಸಂಸ್ಥೆ ಹೇಳಿದೆ. ಮಲೇಷ್ಯಾದಲ್ಲಿ ಈವರೆಗೆ 7,059 ಕೋವಿಡ್ ಪ್ರಕರಣಗಳು ವರದಿಯಾಗಿದ್ದು 114 ಮಂದಿ ಸಾವಿಗೀಡಾಗಿದ್ದಾರೆ.
ಗುರುವಾರ ವಲಸಿಗರಲ್ಲಿ ಪತ್ತೆಯಾಗಿರುವ 35 ಪ್ರಕರಣಗಳಲ್ಲಿ 17 ಮ್ಯಾನ್ಮಾರ್, 15 ಭಾರತ ಮತ್ತು ತಲಾ ಒಂದು ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಈಜಿಪ್ಟ್ ವಲಸಿಗರಲ್ಲಿ ಕಂಡುಬಂದಿರುವುದಾಗಿ ಮಲೇಷ್ಯಾ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ನೂರ್ ಹಿಶಂ ಅಬ್ದುಲ್ಲಾ ತಿಳಿಸಿದ್ದಾರೆ.
ಸೋಂಕಿನ ಮೂಲದ ಕುರಿತು ಈಗಲೂ ತನಿಖೆ ನಡೆಸಲಾಗುತ್ತಿದೆ. ಯಾವುದೇ ಹೇಳಿಕೆ ನೀಡುವ ಮುನ್ನ ನಾವು ವಿಸ್ತೃತ ತನಿಖೆ ನಡೆಸಬೇಕಾಗಿದೆ ಎಂದವರು ಹೇಳಿದರು. ಇದೇ ಸಮಯ ಮಲೇಷ್ಯಾದ ಕಾರ್ಯತಂತ್ರ ಕೋವಿಡ್ ವೈರಸ್ ಸೋಂಕನ್ನು ನಿಯಂತ್ರಿಸುವುದಕ್ಕೆ ನೆರವಾಗುತ್ತಿಲ್ಲವೆಂದು ವಿಶ್ವಸಂಸ್ಥೆಯಲ್ಲಿನ ವಲಸಿಗರ ಕುರಿತ ಮಾನವ ಹಕ್ಕುಗಳ ವಿಶೇಷ ರಾಯಭಾರಿ ಫೆಲಿಪಿ ಗೊನ್ಸಾಲೆಜ್ ಮೊರಾಲ್ಸ್ ಹೇಳಿದ್ದಾರೆ.
ದೇಶದಲ್ಲಿ ಈಗ ಕೈಗೊಳ್ಳಲಾಗುತ್ತಿರುವ ಕಾರ್ಯಾಚರಣೆ ಮತ್ತು ದ್ವೇಷದ ಅಭಿಯಾನ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಎಲ್ಲ ಪ್ರಯತ್ನಗಳ ಮಹತ್ವವನ್ನು ಕುಗ್ಗಿಸುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.