ಕಾಸರಗೋಡು: ಸ್ವಾತಂತ್ರ್ಯ ದಿನದ 75ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಕಿರಿಯ ಪ್ರಾಥಮಿಕ ತರಗತಿಯ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಿದ್ದರೂ ಪ್ರಶ್ನೆಗಳಲ್ಲಿ ಬಹುತೇಕ ಮಲಯಾಳದ ಶಬ್ದಗಳನ್ನು ಬಳಸಿರುವುದು ಕನ್ನಡಿಗರ ಆಕ್ಷೇಪಕ್ಕೆ ಕಾರಣವಾಗಿದೆ.
ಪ್ರಶ್ನೆ ಪತ್ರಿಕೆಯಲ್ಲಿರುವ ಕುಸಿರಕೂಡ್ (ಪ್ರಶ್ನೆ 7), ಪಯಸ್ವಿನಿಯುಡೆ ತೀರಲ್ (ಪ್ರ. 9), ಕಾಟಿಲ್ ಮೊಳಯ್ಯುಂ ಪಚ್ಚಿಲೆಯೆಲ್ಲಾಂ ಕೂಟ್ಟತ್ತೋಡೆಯೆಡುಕ್ಕುಂ ಞಙ`ಳ್ (ಪ್ರ. 12), ಖನಿಜಂ (ಪ್ರ. 16), ಪಾಡುನ್ನ ಪಡವಾಳ್ (ಪ್ರ. 19), ತೋಲ್ ವಿರಕ್ (ಪ್ರ. 20) ಮೊದಲಾದ ಶಬ್ದಗಳು ಮಲಯಾಳದ್ದೇ ಆಗಿವೆ.
ಈ ಶಬ್ದಗಳನ್ನು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೇಳಿರುವುದೇ ಸಂಶಯ. ಹೀಗಿರುವಾಗ ಇಂತಹ ಪ್ರಶ್ನೆಗಳನ್ನು ನೀಡಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸುವ ಹುನ್ನಾರವೇ ? ಎಂಬ ಪ್ರಶ್ನೆ ಸಹಜವಾಗಿ ಬಂದಿದ್ದರೆ ಅಚ್ಚರಿ ಪಡುವಂತದ್ದೇನಿಲ್ಲ.
ಮಲಯಾಳ ಹೇರಿಕೆ ಯತ್ನ?:
ಕಾಸರಗೋಡಿನ ಕನ್ನಡ ಮಾಧ್ಯಮದ ಕಿರಿಯ ಪ್ರಾಥಮಿಕ ತರಗತಿಯ ಮಕ್ಕಳಿಗೆ ಮಲಯಾಳ ಭಾಷೆಯ ಪ್ರಶ್ನೆಗಳನ್ನು ನೀಡಿ ಉತ್ತರಿಸದಂತಾಗಿದೆ. ಕನ್ನಡ ವಿದ್ಯಾರ್ಥಿಗಳ ಮೇಲೆ ಮಲಯಾಳವನ್ನು ಹೇರುವ ಪ್ರಯತ್ನವೇ ಇದು? ಒಂದೆಡೆ ಭಾಷಾ ದ್ವೇಷವಿಲ್ಲ ಎಂದು ತೋರಿಕೆಗೆ ಪ್ರದರ್ಶಿಸಿ ಇನ್ನೊಂದೆಡೆ ಕನ್ನಡ ಭಾಷೆಯನ್ನು ಕೊಲ್ಲುವ ಪ್ರಯತ್ನವೂ ಈ ಮೂಲಕ ನಡೆಯುತ್ತಿದೆ; ಇದು ಯಾವ ಸೀಮೆಯ ನ್ಯಾಯ? ಪ್ರತಿ ಸಂದರ್ಭವೂ ಸರಕಾರ ಕನ್ನಡವನ್ನು ಅವಗಣಿಸುತ್ತಿದೆ ಎಂದು ಕನ್ನಡಿಗರು ಆಕ್ಷೇಪಿಸಿದ್ದಾರೆ.