ತಿರುವನಂತಪುರಂ: 3 ದಶಕಗಳ ಕಾಲ ಮಲಯಾಳಂ ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ಖ್ಯಾತ ನಟ ಮೋಹನ್ ಲಾಲ್ ಅವರು ಸಿನಿ ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಮನೋರಮಾ ವರದಿ ಪ್ರಕಾರ, ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವೇ ಮೋಹನ್ ಲಾಲ್ ವೃತ್ತಿ ಬದುಕಿನ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ.
ಕಾದಂಬರಿಕಾರ ಎಂ.ಟಿ. ವಾಸುದೇವ್ ನಾಯರ್ ವಿರಚಿತ “ರಂಡಮ್ ಓಝಾಮ್’ ಕಾದಂಬರಿಯಾಧರಿತ ಚಿತ್ರ ಇದಾಗಿದೆ. 2017ರ ಅಂತ್ಯಕ್ಕೆ ಚಿತ್ರ ಸೆಟ್ಟೇರಲಿದೆ. ಈ ಸಿನಿಮಾದ ನಂತರ ಮೋಹನ್ ಲಾಲ್ ನಿವೃತ್ತಿಯಾಗಲಿದ್ದಾರೆ ಎಂದು ವರದಿ ವಿವರಿಸಿದೆ.
“ರಂಡಮ್ ಓಝಾಮ್’ ಮಹಾಭಾರತಕಥೆಯನ್ನೊಳಗೊಂಡಿರುವ ಕಾದಂಬರಿಯಾಗಿದೆ. ಈ ಸಿನಿಮಾ ಜಗತ್ತನ್ನೇ ಬೆಚ್ಚಿಬೀಳಿಸಲಿದೆ ಅಂತೆ. ಮೋಲಿವುಡ್ ನಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಹಿಂದಿ, ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಹಿರಿಮೆ ಅವರದ್ದು.
ಇತ್ತೀಚೆಗೆ ಬಿಡುಗಡೆಯಾಗಿರುವ ಒಪ್ಪಂ, ಪುಲಿಮುರುಗನ್ ಸಿನಿಮಾ ಕೂಡಾ ಮೋಹನ್ ಲಾಲ್ ಸಿನಿ ಬದುಕಿಗೆ ಹೊಸ ಭಾಷ್ಯೆ ಬರೆದಿದೆ. ಭಾರತೀಯ ಚಿತ್ರರಂಗಕ್ಕೆ ಲಾಲ್ ಕೊಡುವೆ ಅಪಾರ, ಅವರು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು – ಎರಡು ಅತ್ಯುತ್ತಮ ನಟ ಪ್ರಶಸ್ತಿಗಳು, ಒಂದು ವಿಶೇಷ ಜ್ಯೂರಿ ಪ್ರಶಸ್ತಿ ಮತ್ತು ಒಂದು ಅತ್ಯುತ್ತಮ ಚಿತ್ರಕ್ಕಾಗಿ ಪ್ರಶಸ್ತಿ (ನಿರ್ಮಾಪಕರಾಗಿ) ಮೊದಲಾದವನ್ನು ಪಡೆದಿದ್ದಾರೆ. ಕೇರಳದ ಯಾವುದೇ ನಟರಿಗಿಂತ ಹೆಚ್ಚು ಬಾರಿ ಅಂದರೆ ಆರು ಬಾರಿ ಅತ್ಯುತ್ತಮ ನಟ ಕೇರಳ ರಾಜ್ಯ ಪ್ರಶಸ್ತಿಯನ್ನು ಮೋಹನ್‌ಲಾಲ್ ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ೨೦೦೧ರಲ್ಲಿ ಭಾರತ ಸರ್ಕಾರ ಮೋಹನ್‌ಲಾಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ.