Advertisement

ಗಡಿನಾಡಿನ ಕನ್ನಡಿಗರಿಗೆ ಗುದ್ದು : ಕೇರಳ ಸರಕಾರಿ ಉದ್ಯೋಗಕ್ಕೆ ಮಲಯಾಳ ಕಡ್ಡಾಯ

11:41 PM Feb 24, 2022 | Team Udayavani |

ಕಾಸರಗೋಡು: ಮಲಯಾಳ ಭಾಷೆ ಗೊತ್ತಿಲ್ಲದವರಿಗೆ ಇನ್ನು ಕೇರಳದಲ್ಲಿ ಸರಕಾರಿ ಉದ್ಯೋಗ ಇರುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಘೋಷಿಸಿದ್ದು,  ಜಿಲ್ಲೆಯ ಭಾಷಾ ಅಲ್ಪಸಂಖ್ಯಾಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

Advertisement

ಸರಕಾರಿ ಸೇವೆಗೆ ಸೇರಿದವರು ಮತ್ತು ಹತ್ತನೇ ತರಗತಿಯವರೆಗೆ ಮಲಯಾಳ ಕಲಿಯದವರು ಪ್ರೊಬೇಷನ್‌ ಅವಧಿಯನ್ನು ಪೂರ್ಣಗೊಳಿಸುವ ಮೊದಲು ಭಾಷಾ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಈ ಸಂಬಂಧ ಕಾನೂನು ತಿದ್ದುಪಡಿ ಅಂತಿಮ ಹಂತದಲ್ಲಿದೆ ಎಂದು ಪಿಣರಾಯಿ ವಿಜಯನ್‌ ತಿರುವನಂತಪುರದಲ್ಲಿ ನಡೆದ ಮಲೆಯಾಳ ಮಿಷನ್‌ ಮಾತೃಭಾಷಾ ದಿನಾಚರಣೆಯ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಮಲಯಾಳ ಭಾಷೆಯನ್ನು ವಿಸ್ತರಿಸಬೇಕು. ಬೇರೆ ಭಾಷೆಗಳಂತೆ ಮಲಯಾಳ ಬೆಳೆಯ ಬೇಕು ಎಂದು ಪಿಣರಾಯಿ ಹೇಳಿದ್ದಾರೆ.

ಮೂಲಭೂತ ಹಕ್ಕುಗಳ ಉಲ್ಲಂಘನೆ :

ಕೇರಳದಲ್ಲಿ ಇನ್ನು ಮುಂದೆ ಸರಕಾರಿ ಉದ್ಯೋಗ ಆರ್ಹತೆ ಹೊಂದಲು ಮಲಯಾಳ ಭಾಷೆ ಕಡ್ಡಾಯ ಮಾಡಿರು ವುದು ಕನ್ನಡಿಗರಾದ ಗಡಿನಾಡ ಪ್ರಜೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಯಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಭಿಪ್ರಾಯಪಟ್ಟಿದ್ದಾರೆ.

Advertisement

ಬಡಾಜೆಯಲ್ಲಿ ಜರಗಿದ ಬಿಜೆಪಿ ಸಮರ್ಪಣಾ ನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಯಾಳ ಹೇರಿಕೆ ಖಂಡನೀಯ. ಕನ್ನಡದಲ್ಲಿ ಕಲಿತವರು ಸರಕಾರಿ ಉದ್ಯೋಗದಿಂದ ಅವಕಾಶ ವಂಚಿತರಾಗಲಿದ್ದಾರೆ. ಈ ತೀರ್ಮಾನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕೇರಳ ಸರಕಾರ ಕನ್ನಡಿಗರ ವಿರುದ್ಧ ಮಾಡಿದ ಸಂಚು ಇದಾಗಿದ್ದು ಇದನ್ನು ಎದುರಿಸದಿದ್ದರೆ ಕನ್ನಡಿಗರ ಮೇಲಿನ ದೌರ್ಜನ್ಯವಾಗಲಿದೆ. ಸರಕಾರಿ ಉದ್ಯೋಗವೆಂಬುದು ಗಡಿನಾಡ ಕನ್ನಡಿಗರ ಕನಸಾಗಿಯೇ ಉಳಿಯಲಿದೆ ಎಂದವರು ಹೇಳಿದ್ದಾರೆ.

ಗಡಿಪ್ರದೇಶ ಅಭಿವೃದ್ಧಿ  ಪ್ರಾಧಿಕಾರ ಆಗ್ರಹ :

ಕೇರಳ ಸರಕಾರ ಕಾಸರಗೋಡಿನ ಕನ್ನಡಿಗರ ಉದ್ಯೋಗಕ್ಕೆ ಬಾಧಕ ಆಗುವಂತೆ ಯಾವುದೇ ರೀತಿಯಲ್ಲಿಯೂ ಮಲಯಾಳವನ್ನು ಕಡ್ಡಾಯ ಮಾಡದಿರಲು ಕೇರಳದ ಮುಖ್ಯಮಂತ್ರಿಗಳನ್ನು ಕರ್ನಾ ಟಕದ ಮುಖ್ಯಮಂತ್ರಿಗಳ ಮೂಲಕ ಅಗ್ರಹ ಪೂರ್ವಕವಾಗಿ ಒತ್ತಾಯಿಸುತ್ತೇವೆ. ಮಲಯಾಳ ಕಡ್ಡಾಯವು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ತೀವ್ರ ಸಮಸ್ಯೆ ಉಂಟು ಮಾಡಲಿದೆ ಹಾಗೂ ಅವರ ಹಕ್ಕಿನ ಮೇಲೆ ಸವಾರಿ ಮಾಡಿದಂತಾಗಲಿದೆ. ಒಂದು ವೇಳೆ ಕನ್ನಡಿಗರಿಗೆ ಇರುವ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆ ಆದರೆ ಕಾನೂನಾತ್ಮಕ ಹೋರಾಟ ನಡೆಸ ಬೇಕಾಗುತ್ತದೆ ಎಂದು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಸಿ. ಸೋಮಶೇಖರ ತಿಳಿಸಿದ್ದಾರೆ.

ಕನ್ನಡಿಗರಿಗೆ ಸಂಕಷ್ಟ ನಿಶ್ಚಿತ :

ಈ ಆದೇಶ ಜಾರಿಗೆ ಬಂದಲ್ಲಿ ಕಾಸರಗೋಡಿನ ಕನ್ನಡಿಗರು ಸರಕಾರಿ ಉದ್ಯೋಗದಿಂದ ವಂಚಿತರಾಗಲಿದ್ದಾರೆ. ಪ್ರಸ್ತುತ ಸರಕಾರಿ ಉದ್ಯೋಗಕ್ಕೆ ಸೇರಿ 10 ವರ್ಷದೊಳಗೆ ಭಾಷಾ ಮಲಯಾಳ ಭಾಷಾ ಸಾಮರ್ಥ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎಂದಿದೆ. ಆದರೆ ಈ ನಿಯಮಕ್ಕೆ ತಿದ್ದುಪಡಿ ತರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿರುವುದರಿಂದ ಉದ್ಯೋಗಕ್ಕೆ ಸೇರ್ಪಡೆಯಾದ ಬಳಿಕ ಪ್ರೊಬೆಷನರಿ ಅವಧಿಯಲ್ಲೇ ಮಲಯಾಳ ಭಾಷೆಯನ್ನು ಕಡ್ಡಾಯ ಕಲಿಯಬೇಕಾಗುತ್ತದೆ. ಈಗಿರುವ 10 ವರ್ಷದೊಳಗೆ ಎಂಬ ನಿಯಮವನ್ನು ತೆಗೆದು ಹಾಕಲಾಗುತ್ತದೆ. ಇದರಿಂದ ಕನ್ನಡ ಕಲಿತವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ನಿಯಮ ಜಾರಿಗೆ ಬಂದಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಸಂವಿಧಾನಬದ್ಧ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಾರೆ.

ಈ ಹಿಂದೆಯೂ ಕೇರಳ ಸರಕಾರ ಕನ್ನಡಿಗರ ಮೇಲೆ ಮಲಯಾಳ ಹೇರಿಕೆಗಾಗಿ ಪ್ರಯತ್ನಿಸಿತ್ತು. ಇದರ ವಿರುದ್ಧ ಕನ್ನಡಿಗರು ನಡೆಸಿದ ಹೋರಾಟದ ಫಲಶ್ರುತಿಯಾಗಿ  ಸರಕಾರ ಹಿಂದೆ ಸರಿದಿತ್ತು. ಇನ್ನೀಗ ಮುಂದಿನ ದಿನಗಳಲ್ಲಿ ಇನ್ನಷ್ಟು ಸವಾಲುಗಳು ಎದುರಾಗುವ ಭೀತಿ ಕಾಸರಗೋಡಿನಲ್ಲಿರುವ ಬಹುಭಾಷಾ ನೆಲೆಯ ಕನ್ನಡಿಗರ ಮುಂದಿದೆ.

ಸಂವಿಧಾನಬದ್ಧವಾಗಿ ಕಾಸರಗೋ ಡಿನ ಭಾಷಾ ಅಲ್ಪಸಂಖ್ಯಾಕರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಸರಕಾರ ನಿರಾಕರಿಸುವಂತಿಲ್ಲ. ಸರಕಾರ ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೆ ಸರಕಾರದ ಜತೆ ಮಾತುಕತೆ ನಡೆಸಲಾಗುವುದು. ಇಲ್ಲವೇ ನ್ಯಾಯಾಲಯದ ಮೆಟ್ಟಲೇರಲು ಹಿಂದೇಟು ಹಾಕುವುದಿಲ್ಲ.– ನ್ಯಾಯವಾದಿ ಕೆ.ಎಂ. ಬಳ್ಳಕ್ಕುರಾಯ ಅಧ್ಯಕ್ಷ, ಕರ್ನಾಟಕ ಸಮಿತಿ, ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next