ಕೊಚ್ಚಿ: ಮಾಲಿವುಡ್ ಸಿನಿಮಾರಂಗದ ನಟಿಯೊಬ್ಬರು ಸೋಮವಾರ(ಅ.30 ರಂದು) ತನ್ನ ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರೆಂಜೂಷಾ ಮೆನನ್ (35) ಶವವಾಗಿ ಪತ್ತೆಯಾದ ನಟಿ. ಕೇರಳದ ತಿರುವನಂತಪುರಂನ ಕರಿಯಂನಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ನಟಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನಟಿಯ ಸಾವಿನ ಸುದ್ದಿಯನ್ನು ಕೇಳಿ ಮಾಲಿವುಡ್ ಸಿನಿರಂಗಕ್ಕೆ ಶಾಕ್ ಆಗಿದೆ. ಕಳೆದ ಕೆಲ ಸಮಯದಿಂದ ನಟಿ ರೆಂಜೂಷಾ ಮೆನನ್ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಸಿನಿಮಾರಂಗ ಮಾತ್ರವಲ್ಲದೆ ಕಿರುತೆರೆಯಲ್ಲೂ ಅವರು ಬಣ್ಣ ಹಚ್ಚಿದ್ದರು. ಧಾರಾವಾಹಿಗಳಲ್ಲಿ ಲೈನ್ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆ ಬಳಿಕವಷ್ಟೇ ನಿಖರ ಕಾರಣ ತಿಳಿದು ಬರಬೇಕಿದೆ.
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಅವರು, ‘ಸ್ತ್ರೀ’, ‘ನಿಜಾಲಟ್ಟಂ’, ‘ಮಗಳುದೆ ಅಮ್ಮ’ ಮತ್ತು ‘ಬಾಲಾಮಣಿ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು.
‘ಸಿಟಿ ಆಫ್ ಗಾಡ್’, ‘ಬಾಂಬೆ ಮಾರ್ಚ್ 12’, ‘ಲಿಸಮ್ಮಾಯುಡೆ ವೀಡು’, ‘ಅದ್ಭುತ ದ್ವೀಪ್’, ಮತ್ತು ‘ಕಾರ್ಯಸ್ಥಾನ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
ಮೃತರು ಪತಿ, ತಾಯಿ ಮತ್ತು ತಂದೆಯನ್ನು ಅಗಲಿದ್ದಾರೆ.