Advertisement

Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ

04:15 PM Oct 14, 2024 | Team Udayavani |

ಕೊಚ್ಚಿ: ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಖ್ಯಾತ ಮಾಲಿವುಡ್‌ ನಟ ಬಾಲ (Film actor Bala) ಅವರನ್ನು ಸೋಮವಾರ (ಅ.14ರಂದು) ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

Advertisement

ಎರ್ನಾಕುಲಂನಲ್ಲಿ ಕಡವಂತರಾ ಪೊಲೀಸರು ಬಾಲ ಅವರನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಬಾಲಾ ಮತ್ತು ಅವರ ಮ್ಯಾನೇಜರ್ ಇಬ್ಬರನ್ನು ಕೊಚ್ಚಿಯ ಫ್ಲಾಟ್‌ನಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅನಂತಕೃಷ್ಣನ್  ಅವರನ್ನು ಕೂಡ ಬಂಧಿಸಲಾಗಿದೆ.

ಬಾಲ ಅವರು ಸಾಮಾಜಿಕ ಜಾಲತಾಣದ ಮೂಲಕ ತನ್ನನ್ನು ಹಾಗೂ ತನ್ನ ಮಗಳನ್ನು ನಿಂದಿಸಿ ಪೋಸ್ಟ್‌ ಮಾಡಿದ್ದಾರೆ. ಇದಲ್ಲದೆ ಬಾಲ ವಿಚ್ಛೇದನದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ನನ್ನನ್ನು ಹಾಗೂ ನನ್ನ 12 ವರ್ಷದ ಮಗಳನ್ನು ಕೆಲ ಸಂದರ್ಶನದಲ್ಲಿ ಬೇಕಂತಲೇ ನಿಂದಿಸಿ ಮಾತನಾಡಿದ್ದಾರೆ. ಇದರಿಂದ ತಾವು ಮಾನಸಿಕವಾಗಿ ನೊಂದಿದ್ದೇವೆ ಎಂದು ಅವರ ಮಾಜಿ ಪತ್ನಿ ಅಮೃತಾ ಸುರೇಶ್ (Amrutha Suresh) ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದಲ್ಲದೆ ಈ ಹಿಂದೆ ಅಮೃತಾ ಸುರೇಶ್ ಅವರು ಮದುವೆ ಸಂದರ್ಭದಲ್ಲಿ ತಾನು ಅನುಭವಿಸಿದ್ದ ಕೌಟುಂಬಿಕ ದೌರ್ಜನ್ಯದ ಬಗ್ಗೆ ಬಹಿರಂಗಪಡಿಸಿದ್ದರು. ನಟನ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ವಿಚ್ಛೇದನದ ಒಪ್ಪಂದದ ಪ್ರಕಾರ ಮಗಳನ್ನು ನೋಡಲು ಬಾಲ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಮಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಬಾಲ ಮಗಳು ಹಾಗೂ ಮಾಜಿ ಪತ್ನಿ ಇಬ್ಬರ ಜತೆಯೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮೂರು ವರ್ಷಗಳ ಕಾಲ ನಟನೊಂದಿಗೆ ಕೆಲಸ ಮಾಡುತ್ತಿದ್ದ ಬಾಲಾ ಅವರ ಚಾಲಕ ನಟನ ಅನುಚಿತ ವರ್ತನೆ ಬಗ್ಗೆ ಹಾಗೂ ಹಲ್ಲೆ ನಡೆಸಿರುವ ಬಗ್ಗೆ ಸಾಕ್ಷ್ಯವನ್ನು ಪೊಲೀಸರಿಗೆ ನೀಡಿರುವುದಾಗಿ ವರದಿಯಾಗಿದೆ.

ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅವರಿಗೆ ಜಾಮೀನು ಮಂಜೂರು ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಮಾಜಿ ಪತ್ನಿ ಮತ್ತು ಮಗಳ ಬಗ್ಗೆ ಯಾವುದೇ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಬಾರದು. ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಚರ್ಚಿಸಬಾರದೆಂದು ಕೋರ್ಟ್‌ ಅವರಿಗೆ ಷರತ್ತು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next