Advertisement

3 ಬಾರಿ ನಡೆಯದ ಪುರಸಭೆ ಸಭೆ ಆಡಳಿತಾಧಿಕಾರಿಯಿಂದ ಸದಸ್ಯರಿಗೆ ಅವಮಾನ: ಆರೋಪ

04:10 PM Sep 10, 2020 | sudhir |

ಮಳವಳ್ಳಿ: ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೂರು ಬಾರಿ ಸಭೆ ಕರೆದು ಸಭೆ ನಡೆಸದೇ ಆಡಳಿತಾಧಿಕಾರಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪುರಸಭೆ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಕಚೇರಿ ಮುಂದೆ ಜಮಾಯಿಸಿದ ಜಾ.ದಳ, ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಆಡಳಿತಾಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಜನರ ಸಮಸ್ಯೆ ಚರ್ಚಿಸುತ್ತಿಲ್ಲ: ಪುರಸಭೆ ಸದಸ್ಯ ನಂದಕುಮಾರ್‌ ಮಾತನಾಡಿ, ಕಳೆದ ಮೂರು ತಿಂಗಳಿಂದ ಮೂರು ಬಾರಿ ಸಭೆ ಕರೆದು ಯಾವುದೇ ಮಾಹಿತಿ ನೀಡದೆ ಏಕಾಏಕಿ ಮುಂದೂಡ ಲಾಗಿದೆ. ಇದರಿಂದ ಪಟ್ಟಣದ ಜನರ ಸಮಸ್ಯೆಗಳ ಚರ್ಚಿಸಲು ಸಾಧ್ಯವಾಗಿಲ್ಲ. ನಮ್ಮ ವಾರ್ಡ್‌ಗಳಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಪಟ್ಟಣದಲ್ಲಿನ ಜನರ ಹಾಗೂ ಮತದಾರರಿಂದ ಆಯ್ಕೆಯಾದ ನಮ್ಮ ಮಾತುಗಳನ್ನು ಅಧಿಕಾರಿಗಳನ್ನು ಕೇಳುವುದಿಲ್ಲ ಎಂದು ಆರೋಪಿಸಿದರು.

ಆಡಳಿತಕ್ಕೆ ಅವಕಾಶ ಸಿಕ್ಕಿಲ್ಲ: ಗೆದ್ದು ಒಂದೂವರೆ ವರ್ಷವಾದರೂ ನಮಗೆ ಆಡಳಿತ ನಡೆಸಲು ಅವಕಾಶ ಸಿಕ್ಕಿಲ್ಲ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಸಂಬಂಧ ಪ್ರಕರಣ ನ್ಯಾಯಾಲಯಲ್ಲಿದ್ದು, ಈ ಮಧ್ಯೆ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಅವರನ್ನು ನೇಮಕ ಮಾಡಲಾಗಿದೆ. ಅವರು ಕಳೆದ ಜು.6, ಆ.8 ಮತ್ತು ಸೆ.9ರಂದು ಸಭೆ ಕರೆದಿದ್ದರು. ಆದರೆ, ಸಭೆ ಆರಂಭವಾಗುವುದು ಅರ್ಧ ಗಂಟೆ ಇದ್ದಾಗ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಪುರಸಭೆ ಅಧಿಕಾರಿಗಳು ದೂರವಾಣಿ ಕರೆ ಮಾಡಿ ತಿಳಿಸುತ್ತಾರೆ.

ಅಧಿಕಾರಿಗಳು ಸಹ ಪುರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ಇರುವುದು ಬೇಸರ ಸಂಗತಿಯಾಗಿದೆ. ಜನರಿಂದ ಆಯ್ಕೆಯಾದ ನಮಗೆ ಮಾಡುತ್ತಿರುವ ಅವಮಾನವಾಗಿದೆ. ಕೂಡಲೇ ಆಡಳಿತಾಧಿಕಾರಿ ಸಭೆ ಕರೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಸದಸ್ಯರಾದ ಪ್ರಶಾಂತ್‌ಕುಮಾರ್‌, ಬಸವರಾಜು, ಪುಟ್ಟಸ್ವಾಮಿ, ರವಿ, ವಡ್ಡರಹಳ್ಳಿ ಸಿದ್ದರಾಜು, ಕುಮಾರ್‌, ನಾಗೇಶ್‌, ನೂರುಲ್ಲಾ, ಸುನೀತಾ, ಮಹೇಶ್ವರಿ, ಸವಿತಾ, ಅಥಿಯ ಬೇಗಂ, ಮಣಿ, ಇಂದ್ರಮ್ಮ, ಪ್ರಮೀಳ, ಶಿವಕುಮಾರ್‌, ಭಾಗ್ಯಮ್ಮ, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next