Advertisement

ಲಾಭದ ಹಳಿಗೆ ಬಂದ ಮಳವಳ್ಳಿ ರೈತರು

04:44 PM May 08, 2017 | Harsha Rao |

ಬರಗಾಲ ಹಿಂಡುತ್ತಿದೆ. ಆದರೆ ಮಂಡ್ಯ, ಮಳವಳ್ಳಿ ರೈತರು ಬೆಳೆದ ಬೆಳೆ ಆಯಾ ರೈತರ ಜಮೀನಿನಲ್ಲೇ ಹತ್ತಿರದ ಮಾರುಕಟ್ಟೆಗಿಂತ ಹೆಚ್ಚು ಬೆಲೆಗೆ ಖರೀದಿಯಾಗುತ್ತದೆ. ಬೆಳೆಗಳಿಗೆ ಬಳಸುವ ರಸಗೊಬ್ಬರ ಪ್ರಮಾಣ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ತಗಲುವ ವೆಚ್ಚ ಅರ್ಧಕ್ಕರ್ಧ ಕಡಿಮೆಯಾಗಿದೆ. ಸಾಗಾಣಿಕೆ ವೆಚ್ಚ, ಮಧ್ಯವರ್ತಿಗಳ ಹಾವಳಿಯೂ ಇಲ್ಲ. 

Advertisement

ಇದಕ್ಕೆ ಕಾರಣ. ಮಳವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ರೈತರೇ ಸೇರಿಕೊಂಡು ಗುಂಪು ಮಾಡಿಕೊಂಡಿದ್ದಾರೆ. ಅದರಲ್ಲಿ 964 ರೈತರು ಸದಸ್ಯರಿದ್ದಾರೆ. ಆ ಪೈಕಿ 130 ರೈತರು ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಸರ್ಕಾರ ಮತ್ತು “ಲೀಫ್’ ಕಂಪೆನಿ ಸಹಭಾಗಿತ್ವ)ದಲ್ಲಿ ಕೈಗೆತ್ತಿಕೊಂಡ “ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ’ಯೊಂದಿಗೆ ಕೈಜೋಡಿಸಿದ್ದಾರೆ.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಲ್ಲಿ ಮೂರು ಜನ ಕೈಜೋಡಿಸಿದ್ದಾರೆ. ಒಂದು ಸರ್ಕಾರ ಮತ್ತೂಂದು ಲೀಫ್ ಕಂಪೆನಿ ಹಾಗೂ ಇನ್ನೊಂದು ರೈತರ ಗುಂಪು. ಇದರಲ್ಲಿ ಸರ್ಕಾರ ಕೃಷಿ ಉಪಕರಣಗಳ ಸಬ್ಸಿಡಿ ನೀಡಿದರೆ, ಕಂಪೆನಿಯು ರೈತರಿಗೆ ತಾಂತ್ರಿಕ ಸಲಹೆಗಳನ್ನು ನೀಡುತ್ತದೆ. ಇದರಿಂದ ಅವರು ಬೆಳೆದ ಬೆಳೆಗಳನ್ನು ಖರೀದಿಸುತ್ತದೆ. ರೈತರಿಗೆ ಸರ್ಕಾರದ ಸಬ್ಸಿಡಿ ಜತೆಗೆ ಖಾಸಗಿ ಕಂಪನಿಯಿಂದ ನೇರ ಮಾರುಕಟ್ಟೆ ಮತ್ತು ತಾಂತ್ರಿಕ ಸಲಹೆ ದೊರೆಯುತ್ತಿದೆ. ಇದರಿಂದ ಈ ಯೋಜನೆಗೆ ಒಳಪಟ್ಟ ಬಹುತೇಕ ರೈತರ ಅದೃಷ್ಟ ಖುಲಾಯಿಸಿದೆ. 

130 ರೈತರು ಸುಮಾರು 130 ಎಕರೆಯಲ್ಲಿ ಸಾಮಾನ್ಯ ನೀರಾವರಿ ಪದ್ಧತಿಯಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಇದರಿಂದ ನಿತ್ಯ ಕನಿಷ್ಠ 7ರಿಂದ ಗರಿಷ್ಠ 10 ಟನ್‌ ತರಕಾರಿ ಬರುತ್ತಿದೆ. ಅವುಗಳ ಪೈಕಿ “ಎ’ ಗ್ರೇಡ್‌ ಉತ್ಪನ್ನಗಳನ್ನು ಮಾತ್ರ ಜಮೀನಿನಲ್ಲೇ ಖರೀದಿಸಲಾಗುತ್ತದೆ. ಹೀಗೆ ಖರೀದಿಸಿದ ಉತ್ಪನ್ನಗಳು ಮೌಲ್ಯವರ್ಧನೆಗೊಂಡು ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಲ್ಲಿರುವ ರಿಲಾಯನ್ಸ್‌, ಮೋರ್‌ನಂತಹ ಆಧುನಿಕ ರಿಟೇಲ್‌ ಮಾರುಕಟ್ಟೆ ಪ್ರವೇಶಿಸುತ್ತವೆ. ಇದರಿಂದ ರೈತರಿಗೂ ಕೈತುಂಬ ಹಣ ಸಿಗುತ್ತದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಉತ್ಪನ್ನಗಳೂ ದೊರೆಯುತ್ತವೆ.  

ಆದಾಯ ಹೆಚ್ಚಳ 
ರೈತರು ಮಾರುಕಟ್ಟೆಯಲ್ಲಿ ಮಾತ್ರವಲ್ಲ; ವಿವಿಧ ಹಂತಗಳಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಈ ಮೂಲಕ ಉತ್ಪಾದಕತೆಯಲ್ಲಿ ಹೆಚ್ಚಳ, ಕೊಯ್ಲೋತ್ತರ ನಷ್ಟದ ಪ್ರಮಾಣ ತಗ್ಗಿಸುವುದು, ಗುಣಮಟ್ಟ ಸುಧಾರಣೆ ಹಾಗೂ ಜಮೀನಿನಲ್ಲೇ ಖರೀದಿಸುವ ಮೂಲಕ ರೈತರ ಒಟ್ಟಾರೆ ಆದಾಯವನ್ನು ಕನಿಷ್ಠ ಶೇ. 30ರಷ್ಟು ಹೆಚ್ಚಿಸಲಾಗುವುದು ಇದರ ಮೂಲ ಗುರಿ. 

Advertisement

ಸರ್ಕಾರಿ ನೌಕರನಿಗಿಂತ ಒಳ್ಳೆಯ ಸಂಬಳ
“ಸರ್ಕಾರಿ ಸಂಬಳಕ್ಕಿಂತ ಒಳ್ಳೆಯ ಸಂಬಳ ನಮಗೇ ಸಿಗುತ್ತಿದೆ ಸಾರ್‌’ ಎನ್ನುತ್ತಾರೆ ಉಪ್ಪುಗೆರೆಕೊಪ್ಪಲು ಗ್ರಾಮದ ರೈತ ನಾಗಣ್ಣ. ನಾಗಣ್ಣ ಅವರದ್ದು 30 ಗುಂಟೆ ಜಮೀನು ಇದೆ. ಅದರಲ್ಲಿ 20 ಗುಂಟೆಯಲ್ಲಿ ಬೆಂಡೆ ಹಾಕಿದ್ದಾರೆ. ಅದನ್ನು 22ರಿಂದ 24 ಬಾರಿ ಕಟಾವು ಮಾಡಿದ್ದು, 1,830 ಕೆಜಿ ಇಳುವರಿ ಬಂದಿದೆ. ಉಳಿದದ್ದರಲ್ಲಿ ಕೋಸು ಹಾಕಿದ್ದಾರೆ. ಆರೂವರೆ ಟನ್‌ ಇಳುವರಿ ಬಂದಿದೆ. ಕೇವಲ ಮೂರು ತಿಂಗಳಲ್ಲಿ ಅವರು ಪಡೆದ ಆದಾಯ 70 ಸಾವಿರ ರೂ. ಇದಕ್ಕೆ ಕಾರಣ ಯೋಜನೆಯೊಂದಿಗೆ ಕೈಜೋಡಿಸಿದ್ದು. ನನ್ನನ್ನು ನೋಡಿ ಗ್ರಾಮದ ಐದಾರು ಜನ ರೈತರು ಯೋಜನೆಯೊಂದಿಗೆ ಕೈಜೋಡಿಸಲು ಮುಂದೆಬಂದಿದ್ದಾರೆ ಎಂದು ಹೇಳುತ್ತಾರೆ.  

4 ತಿಂಗಳಲ್ಲಿ 4 ಲಕ್ಷ ರೂ.
ಅದೇ ರೀತಿ, ಹಣಕೋಳದ ರೈತ ಕೆ.ಎಸ್‌. ಅಂದಾನಿ ನವೆಂಬರ್‌ನಲ್ಲಿ ತಮ್ಮ ನಾಲ್ಕು ಎಕರೆ ಜಮೀನಿನ ಪೈಕಿ ಎರಡು ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದರು. ಫೆಬ್ರವರಿ ಹೊತ್ತಿಗೆ ಅವರು ನಾಲ್ಕು ಲಕ್ಷ ರೂ. ಆದಾಯ ಗಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಮೊದಲು ಟೊಮೆಟೊ, ಹಾಗಲಕಾಯಿ ಬೆಳೆಯುತ್ತಿದ್ದೆ. ಯೋಜನೆ ಅಡಿ ಕೈಜೋಡಿಸಿದ ನಂತರ ತಜ್ಞರು ಬದನೆಕಾಯಿ, ಕೋಸು, ಹಾಗಲಕಾಯಿ ಬೆಳೆಯಲು ಸಲಹೆ ಮಾಡಿದರು. ಅದರಂತೆ ಎರಡು ಎಕರೆಯಲ್ಲಿ ಬದನೆ ಹಾಕಿದೆ. ಇದಕ್ಕೆ ಕಂಪೆನಿಯೇ ಕಡಿಮೆ ದರದಲ್ಲಿ ಬೀಜ ಕೊಟ್ಟಿತು. ಎಕರೆಗೆ 40 ಟನ್‌ ಇಳುವರಿ ಬಂದಿತು.

ಪಕ್ಕದವರ ಜಮೀನಿನಲ್ಲಿ ಗರಿಷ್ಠ 20 ಟನ್‌ ಬಂದಿದೆ. ಉಳಿದ ಜಾಗದಲ್ಲಿ ಬೆಂಡೇಕಾಯಿ, ಕೋಸು ಮತ್ತು ಹಾಗಲಕಾಯಿ ಹಾಕಿದ್ದೆ. ನಾಲ್ಕು ಎಕರೆಯಲ್ಲಿ ಐದು ಲಕ್ಷ ಆದಾಯ ಬಂದಿದೆ. ಔಷಧ ಸಿಂಪರಣೆ ಪ್ರಮಾಣ ಶೇ. 50ರಷ್ಟು ಕಡಿಮೆಯೂ ಆಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. 

3.50 ಲಕ್ಷ ರೂ.ಆದಾಯ
ಗುಂಪಿನ ಮತ್ತೂಬ್ಬ ಸದಸ್ಯ ಮಳವಳ್ಳಿ ಗ್ರಾ.ಪಂ. ದೊಡ್ಡಬೂಹಳ್ಳಿ ರೈತ ಬಿ.ಎಂ. ಮಹೇಶ್‌, ಈ ಮೊದಲು ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಸ್ವತಂತ್ರವಾಗಿಯೇ ಕೃಷಿ ಮಾಡುತ್ತಿದ್ದರು. ಆದರೆ, ವರ್ಷದ ಆದಾಯ ಒಂದೂವರೆ ಲಕ್ಷ. ಆದರೆ, ಈ ಯೋಜನೆಗೆ ಕೈಜೋಡಿಸಿದ ನಂತರ ಕಳೆದ ಹತ್ತು ತಿಂಗಳಲ್ಲಿ ಮೂರೂವರೆ ಲಕ್ಷ ಬಂದಿದೆ. 

“ಈ ಮೊದಲು ಟೊಮೆಟೊ, ಮೆಣಸಿನಕಾಯಿ, ರಾಗಿ ಬೆಳೆಯುತ್ತಿದ್ದೆ. ನಂತರ ಅದನ್ನು ಮೈಸೂರು ಎಪಿಎಂಸಿಗೆ ಸಾಗಿಸುತ್ತಿದ್ದೆವು. ಈ ಸಾಗಣೆ ವೆಚ್ಚ 1,000ದಿಂದ 1,200 ರೂ. ಆಗುತ್ತಿತ್ತು. ಅಲ್ಲಿ ಕಮೀಷನ್‌ ಕೊಡಬೇಕಾಗುತ್ತಿತ್ತು. ಆದರೆ, ಇಲ್ಲಿ ನಮಗೆ ಮಣ್ಣಿನ ಪರೀಕ್ಷೆಯಿಂದ ಹಿಡಿದು ಪ್ರತಿಯೊಂದು ಮಾಹಿತಿ ದೊರೆಯುತ್ತದೆ. ಯಾವ ಬೆಳೆ ಬೆಳೆಯಬೇಕು ಎಂಬುದನ್ನು ತಜ್ಞರು ಸೂಚಿಸುತ್ತಾರೆ. ಆ ಬೀಜಗಳನ್ನೂ ಅವರೇ ನೀಡುತ್ತಾರೆ. ಯಾವ ಔಷಧ ಸಿಂಪರಣೆ ಮಾಡಬೇಕು ಎನ್ನುವುದನ್ನು ಹೇಳುತ್ತಾರೆ. ಕೊನೆಗೆ ಬೆಳೆಯನ್ನೂ ಜಮೀನಿಗೆ ಬಂದು ಖರೀದಿಸುತ್ತಾರೆ. ಹಾಗಾಗಿ, ಹೆಚ್ಚು ಲಾಭ ದೊರೆಯುತ್ತಿದೆ’ ಎನ್ನುತ್ತಾರೆ ಮಹೇಶ್‌.  

ಮಳವಳ್ಳಿ, ಚಿಕ್ಕಬಳ್ಳಾಪುರ, ಬಳ್ಳಾರಿ, ಬೆಳಗಾವಿ, ಚಾಮರಾಜನಗರ, ಚಿತ್ರದುರ್ಗ ಸೇರಿದಂತೆ ಒಟ್ಟಾರೆ ಏಳು ಕಡೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಸದ್ಯ 1,885 ರೈತರು ಇದರ ಫ‌ಲಾನುಭವಿಗಳಾಗಿದ್ದಾರೆ. ಇದಕ್ಕೆ ಸರ್ಕಾರ ಶೇ. 50ರಷ್ಟು ಅನುದಾನ ನೀಡಿದರೆ, ಕಂಪೆನಿಗಳು ಶೇ. 30ರಿಂದ 30 ಹಾಗೂ ರೈತರು ಶೇ. 10ರಿಂದ 20 (ಕೂಲಿ ಮತ್ತಿತರ ವೆಚ್ಚ)ರಷ್ಟು ಹೂಡಿಕೆ ಮಾಡುತ್ತಾರೆ. ಯೋಜನೆ ಅಡಿ ತರಕಾರಿ, ಬಾಳೆಹಣ್ಣು, ಈರುಳ್ಳಿ, ಮೆಣಸಿನಕಾಯಿ ಬೆಳೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೈಜೋಡಿಸಿದ ಕಂಪೆನಿಗಳು ರೈತರು ಬೆಳೆದಿದ್ದರಲ್ಲಿ ಕನಿಷ್ಠ ಶೇ. 50ರಷ್ಟು ಉತ್ಪನ್ನಗಳನ್ನು ಖರೀದಿಸಬೇಕು. ಯೋಜನೆ ಪೂರ್ಣಗೊಳ್ಳುವಷ್ಟರಲ್ಲಿ ಪ್ರತಿ ಕಂಪೆನಿ ತಲಾ 500 ರೈತರನ್ನು ಒಳಗೊಂಡಿರಬೇಕು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಆಯುಕ್ತ  ಪಿ.ಸಿ.ರೇ. 

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next