ಹಾವೇರಿ: ದೇವರಗುಡ್ಡದ ಮಾಲತೇಶ ದೇವರ ದರ್ಶನ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆ ಭಕ್ತರಿಗೆ ದೇವಸ್ಥಾನದ ಒಳಗಡೆ ನಿರ್ಬಂಧ ವಿಧಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ದೇವಸ್ಥಾನದ ಆವರಣದಲ್ಲಿನ ಹಣ್ಣು,ಕಾಯಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಸಿಎಂ ಸಿದ್ದರಾಮಯ್ಯನವರು ದೇವಸ್ಥಾನಕ್ಕೆ ಭೇಟಿ ನೀಡುವ ಮಾಹಿತಿ ಇಲ್ಲದೇ ವಿವಿಧಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಸಮಸ್ಯೆ ಎದುರಿಸುವಂತಾಗಿದೆ. ದೇವಸ್ಥಾನ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಿ ಬ್ಯಾರಿಕೇಟ್ ಅಳವಡಿಸಿ ಭಕ್ತರನ್ನು ತಡೆಯಲಾಗುತ್ತಿದ್ದು, ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ದೇವಸ್ಥಾನಕ್ಕೆ ಭಕ್ತಾದಿಗಳಿಗೆ ನಿರ್ಭಂದ ಹೇರಿದ್ದು, ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆಯದೆ ವಾಪಾಸ್ ತೆರಳುತ್ತಿದ್ದಾರೆ.
ನಾವು ಭದ್ರಾವತಿಯಿಂದ ಬಂದಿದ್ವಿ. ದೇವರ ದರ್ಶನಕ್ಕೆ ಬಂದಿದ್ದೇವು. ಆದರೆ ಪೊಲೀಸರು ದೇವಸ್ಥಾನದ ಒಳಗಡೆ ಬಿಡುತ್ತಿಲ್ಲ, ಸಿಎಂ ಬರ್ತಾರೆ ದೇವರ ದರ್ಶನಕ್ಕೆ ಅವಕಾಶ ಇಲ್ಲ ಅಂತಾ ಮೊದಲೇ ಹೇಳಬೇಕಿತ್ತು ಎಂದು ದೇವರ ದರ್ಶನಕ್ಕೆ ಆಗಮಿಸಿದ್ದ ಭದ್ರಾವತಿಯ ಅವಿನಾಶ ಆಕ್ರೋಶ ವ್ಯಕ್ತಪಡಿಸಿದರು.