Advertisement

2025ಕ್ಕೆ ಮಲೇರಿಯಾ ಮುಕ್ತ ಜಿಲ್ಲೆ ಗುರಿ

07:09 AM Jun 29, 2019 | Lakshmi GovindaRaj |

ಚಿಕ್ಕಬಳ್ಳಾಪುರ: 2025 ರೊಳಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸಂಪೂರ್ಣ ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಂದಿದ್ದು, ಜಿಲ್ಲೆಯ ಎಲ್ಲಾ ಇಲಾಖೆಗಳ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಜವಾಬ್ದಾರಿಯುತವಾಗಿ ಜಿಲ್ಲಾ ಆರೋಗ್ಯ ಇಲಾಖೆ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಜಿಲ್ಲಾದ್ಯಂತ ಮಲೇರಿಯಾ ಜ್ವರದ ನಿಯಂತ್ರಣಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಹೊರ ರಾಜ್ಯ ಹಾಗೂ ಜಿಲ್ಲೆಗಳ ಕೂಲಿ ಕಾರ್ಮಿಕರಲ್ಲಿ ಮಲೇರಿಯಾ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಿ ತೀವ್ರ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಮಲೇರಿಯಾ ಜ್ವರವು ಅನಾಫಿಲೀಸ್‌ ಹೆಣ್ಣು ಸೊಳ್ಳೆಯ ಸೋಂಕಿನಿಂದ ಹರಡುತ್ತದೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ಮನೆ ಸುತ್ತಮುತ್ತಲೂ ಸ್ವತ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ರೋಗ ಹರಡುವಿಕೆಯನ್ನು ತಡೆಗಟ್ಟಬೇಕು.

ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎಂಬ ಘೋಷವಾಕ್ಯದೊಂದಿಗೆ ಜೂ.1ರಿಂದ 30 ರವರೆಗೆ ಜಿಲ್ಲಾದ್ಯಂತ ಮಲೇರಿಯಾ ನಿಯಂತ್ರಣ ಹಾಗೂ ಮಲೇರಿಯಾ ಮುಕ್ತಗೊಳಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

Advertisement

ಲಕ್ಷಣಗಳು: ಆರೋಗ್ಯ ಸಹಾಯಕರು ನಿಗದಿತ ಕ್ಷೇತ್ರದಲ್ಲಿ ಮನೆ ಮನೆ ಭೇಟಿ ವೇಳೆಯಲ್ಲಿ ಕಂಡು ಬರುವ ಎಲ್ಲಾ ಜ್ವರದ ಪ್ರಕರಣಗಳಿಗೆ ರಕ್ತ ಲೇಪನಗಳನ್ನು ಸಂಗ್ರಹಿಸಿ ಮಲೇರಿಯಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಲೇರಿಯಾ ಜ್ವರ ಬರುವ ಮುಖ್ಯ ಲಕ್ಷಣಗಳು ಈ ರೋಗಕ್ಕೆ ತುತ್ತಾದವರು ಇದ್ದಕ್ಕಿದ್ದಂತೆ ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರನೋವು, ಕೀಲು ನೋವು, ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ ಎಂದರು.

ಸಾರ್ವಜನಿಕರ ಸಹಕಾರ ಅಗತ್ಯ: ಮಲೇರಿಯಾ ಪ್ರಕರಣಗಳ ಹರಡದಂತೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಜಿಲ್ಲೆಯ ಸಾರ್ವಜನಿಕರು ಸಹಕರಿಸಬೇಕು. ವಿಶೇಷವಾಗಿ ಮನೆ ಮತ್ತು ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಂಡು ಲಾರ್ವಗಳನ್ನು ನಾಶಮಾಡಿ ತಮ್ಮ ಮನೆಯ ಬ್ಯಾರಲ್‌, ಡ್ರಂ, ತೊಟ್ಟಿಗಳು, ತಾಜ್ಯ ವಸ್ತುಗಳಾದ ಎಳನೀರು ಚಿಪ್ಪು, ಬಾಟಲಿ, ಟೈರು,

ಮಡಕೆ ಮುಂತಾದವುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಪ್ರತಿ ದಿನ ಸಂಜೆಯ ವೇಳೆ ಬೇವಿನಸೊಪ್ಪು ಹೊಗೆ ಹಾಕುವುದರ ಮುಂಖಾಂತರ ಸೊಳ್ಳೆ ನಿಯಂತ್ರಣ ಕೈಗೊಳ್ಳಬೇಕು. ವಾರಕ್ಕೊಮ್ಮೆ ನೀರಿನ ತಾಣಗಳನ್ನು ಸ್ವತ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಿ ನಂತರ ನೀರು ತುಂಬಿಕೊಂಡು ಹಾಗೂ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಲು ತಿಳಿಸಿದರು.

ಜನ ಜಾಗೃತಿ ಜಾಥಾ: ಜನ ಜಾಗೃತಿ ಜಾಥಾದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು, ನಗರದ ವಿವಿಧ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಮಲೇರಿಯಾ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್‌, ತಾಲೂಕು ಆರೋಗ್ಯ ಅಧಿಕಾರಿ ಮುನಿಯಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಸುಧ, ಆರೋಗ್ಯ ಸುರಕ್ಷಿತ ಅಧಿಕಾರಿ ಜಿ.ಹರೀಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರನ್ನು ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರಂತೆ ನೇಮಿಸಲಾಗಿದ್ದು, ಮಲೇರಿಯಾ ರೋಗ ದೃಢಪಟ್ಟ ರೋಗಿಗಳನ್ನು ಪೂರ್ಣ ಚಿಕಿತ್ಸೆ ಮುಗಿಯುವವರೆಗೂ ಪ್ರತಿ ದಿನ ಅನುಸರಣೆ ಮಾಡಲಾಗುತ್ತಿದೆ.
-ಡಾ.ರಮೇಶ್‌, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next