Advertisement

ಮಲೇರಿಯಾ ನಿಯಂತ್ರಣ ಕಾರ್ಯಕ್ರಮ ಯಶಸ್ವಿ

09:23 PM Apr 26, 2019 | Lakshmi GovindaRaju |

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ವರ್ಷ 5 ಮಲೇರಿಯಾ ಪ್ರಕರಣಗಳು ಕಂಡು ಬಂದಿದ್ದವು. ಈ ವರ್ಷ ಇದುವರೆಗೂ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕಾಂತರಾಜು ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ನಡೆದ ಮಲೇರಿಯಾ ರೋಗ ನಿಯಂತ್ರಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, 2017ರಲ್ಲಿ 65 ಮಂದಿಗೆ ಮಲೇರಿಯಾ ಸೋಂಕು ಹರಡಿತ್ತು.

ಜನರಲ್ಲಿ ಮಲೇರಿಯಾ ಜಾಗೃತಿ ಮೂಡಿಸುತ್ತಿರುವ ಪರಿಣಾಮ 2018ರಲ್ಲಿ 10 ಮಂದಿಗೆ ಮಾತ್ರ ಕಾಣಿಸಿಕೊಂಡಿದ್ದು, 2019ರಲ್ಲಿ ಸೋಂಕು ದಾಖಲಾಗದೇ ನಿಯಂತ್ರಣ ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎಂಬ ಘೋಷ ವಾಕ್ಯದೊಂದಿಗೆ ಮಲೇರಿಯಾ ನಿರ್ಮೂಲನೆಗೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಅನಾಫಿಲಿಸ್‌ ಸೊಳ್ಳೆಯಿಂದ ಮಲೇರಿಯಾ: ಮಲೇರಿಯಾ ರೋಗ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುವ ಕಾಯಿಲೆಯಾಗಿದ್ದು, ಅನಾಫಿಲಿಸ್‌ ಜಾತಿಗೆ ಸೇರಿದ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಮಲೇರಿಯಾ ಸೋಂಕಿರುವ ರೋಗಿಯನ್ನು ಸೊಳ್ಳೆ ಕಚ್ಚಿದಾಗ ಮಲೇರಿಯಾ ರೋಗಾಣು ಸೊಳ್ಳೆಯ ಶರೀರ ಪ್ರವೇಶಿಸಿ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚುವ ಮೂಲಕ ಮಲೇರಿಯಾ ರೋಗಾಣು ಇನ್ನೊಬ್ಬರಿಗೆ ಹರಡುತ್ತದೆ ಎಂದು ತಿಳಿಸಿದರು.

ಸ್ವಚ್ಛತೆ ಕಾಪಾಡಿ: ಸ್ವಾಭಾವಿಕ ನೀರಿನ ತಾಣಗಳಾದ ಕೆರೆ, ಬಾವಿ, ನದಿ, ಕಾಲುವೆ, ಹೊಂಡಗಳು ಮತ್ತಿತರ ನೀರು ನಿಲ್ಲುವ ಜಾಗಗಳಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿ ಹೊಂದಲಿದ್ದು, ನೀರು ನಿಲ್ಲುವ ತಾಣಗಳಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬೇಕಿದೆ ಇಲ್ಲದಿದ್ದರೆ ಮಲೇರಿಯಾ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದರು.

Advertisement

ಜ್ವರ ಬಂದರೆ ವೈದ್ಯರ ಸಲಹೆ ಪಡೆಯಿರಿ: ಮಲೇರಿಯಾ ರೋಗ ಬಂದ ವ್ಯಕ್ತಿಗೆ ಚಳಿ, ನಡುಕ, ತಲೆನೋವು ಕಾಣಿಸಿಕೊಳ್ಳುತ್ತದೆ. ನಂತರ ಜ್ವರ ತೀವ್ರವಾಗಿ ಹೆಚ್ಚುತ್ತದೆ. ವಿಪರೀತ ತಲೆನೋವು ಹಾಗೂ ವಾಕರಿಕೆ ಸುಮಾರು 6 ಗಂಟೆಗಳ ಕಾಲ ಕಾಣಿಸಿಕೊಳ್ಳುತ್ತದೆ. ನಂತರ ಜ್ವರ ಇಳಿಯುತ್ತದೆ ಹಾಗೂ ದೇಹವಿಡೀ 2ರಿಂದ 4 ಗಂಟೆಗಳ ಕಾಲ ವಿಪರೀತ ಬೆವರುತ್ತದೆ. ದಿನ ಬಿಟ್ಟು ದಿನ ಅಥವಾ ಎರಡು ದಿನಕ್ಕೆ ಒಮ್ಮೆಯಂತೆ ಮರುಕಳಿಸುತ್ತದೆ ಎಂದು ತಿಳಿಸಿದರು.

ರಕ್ತ ಪರೀಕ್ಷೆ ನಡೆಸಿ: ರಕ್ತವನ್ನು ಪರೀಕ್ಷೆಗೆ ಸಂಗ್ರಹಿಸಿ ರಕ್ತ ಪರೀಕ್ಷೆಯಲ್ಲಿ ಮಲೇರಿಯಾ ರೋಗವು ದೃಢಪಟ್ಟಲ್ಲಿ ರೋಗಾಣು ಜಾತಿಯ ಅನುಗುಣವಾಗಿ ಕ್ಲೋರೋಕ್ವಿನ್‌ ಮತ್ತು ಪ್ರೈಮಾಕ್ಸಿನ್‌ ಔಷಧಿಗಳನ್ನು ನೀಡಿ ಮಲೇರಿಯಾ ನಿಯಂತ್ರಣ ಮಾಡಲಾಗುತ್ತದೆ ಎಂದರು.

ಮಲೇರಿಯಾ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸದಾಕಾಲ ಚಿಕಿತ್ಸೆ ದೊರೆಯಲಿದ್ದು, ಶಿಶುಗಳು ಮತ್ತು ಗರ್ಭಿಣಿಯರಿಗೆ ಮಲೇರಿಯಾ ರೋಗವು ಅತಂಕಕಾರಿಯಾಗಿದೆ ಅಂತಹವರು ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.

ಮೈ ತುಂಬಾ ಬಟ್ಟೆ ಧರಿಸಿ: ಮನೆಯ ಕಿಟಕಿ ಬಾಗಿಲುಗಳಿಗೆ ಕೀಟಗಳು ನುಸುಳದಂತೆ ಜಾಲರಿಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಸೊಳ್ಳೆ ಪರದೆ ಹಾಕಿಕೊಳ್ಳಬೇಕು. ಸಂಜೆ ವೇಳೆ ಬೇವಿನ ಸೊಪ್ಪಿನ ಹೊಗೆ ಹಾಕುವುದು.ಸಾಂಬ್ರಾಣಿ ಧೂಪ ಹಾಕುವುದು ಹಾಗೂ ಮೈ ತುಂಬ ಬಟ್ಟೆ ಧರಿಸಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು, ಗ್ರಾಮಸ್ಥರು, ಆರೋಗ್ಯ ಕಾರ್ಯಕರ್ತರೊಡನೆ ಸಹಕರಿಸಿ ಮೇಲ್ಕಂಡ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಲ್ಲಿ ಮಲೇರಿಯಾ ನಿಯಂತ್ರಣವು ಸಾಧ್ಯವಾಗಲಿದ್ದು, 2025ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವಾಗಿಸಬೇಕು ಎಂದರು.

ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಜು, ಜಿಲ್ಲಾ ಕಣ್ಗಾವಲು ಘಟಕ ಅಧಿಕಾರಿ ಡಾ.ನಾಗರಾಜು, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹದೇವು, ಶಸ್ತ್ರ ಚಿಕಿತ್ಸಕ ಡಾ. ಅಂಕಪ್ಪ, ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್‌, ಆರೋಗ್ಯ ಮೇಲ್ವಿಚಾರಕ ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next