Advertisement

ಜಿಲ್ಲೆಯ ಪ್ರತಿ ಮನೆಗೂ ಮಲಪ್ರಭ 

02:45 PM Aug 23, 2018 | Team Udayavani |

ಧಾರವಾಡ: ಮಹದಾಯಿ ನದಿಯಿಂದ ರಾಜ್ಯಕ್ಕೆ (ಮಲಪ್ರಭಾ ನದಿಗೆ) 4 ಟಿಎಂಸಿ ಕುಡಿಯುವ ನೀರು ಸಿಗುತ್ತಿದ್ದಂತೆ ಧಾರವಾಡ ಜಿಲ್ಲೆಯ ಸಮಗ್ರ ಹಳ್ಳಿಗಳ ಕುಡಿಯುವ ನೀರು ಪೂರೈಕೆ ಯೋಜನೆಗೆ ಇದೀಗ ಶಕ್ತಿ ಬಂದಂತಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ಮಾದರಿಯಲ್ಲೇ ಇಡೀ ಧಾರವಾಡ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಧಾರವಾಡ ಜಿಪಂ ಮತ್ತು ಜಿಲ್ಲಾಡಳಿತ 1200 ಕೋಟಿ ರೂ. ವೆಚ್ಚದ ಮನೆ ಮನೆಗೆ ಶುದ್ಧ ನೀರು ಎನ್ನುವ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

Advertisement

ಯೋಜನೆ ಅನ್ವಯ ಜಿಲ್ಲೆಯಲ್ಲಿನ 388 ಹಳ್ಳಿಗಳ ಮನೆ ಮನೆಗೂ ಮಲಪ್ರಭೆಯ ಶುದ್ಧವಾದ ಕುಡಿವ ನೀರು ತಲುಪಲಿದೆ. ಅದಕ್ಕಾಗಿ 10 ಜನ ತಂತ್ರಜ್ಞರನ್ನ ಒಳಗೊಂಡ ತಂಡವೊಂದು ಅಧ್ಯಯನ ನಡೆಸಿ ನೀರು ಪೂರೈಕೆ, ಪೈಪ್‌ಲೈನ್‌ ಜಾಲ, ವಿದ್ಯುತ್‌ ಪೂರೈಕೆ, ಪಂಪ್‌ ಗಳ ಅಳವಡಿಕೆ ಸೇರಿ ಒಟ್ಟಾರೆ ಯಾವುದೇ ಆತಂಕವಿಲ್ಲದೇ ಹಳ್ಳಿಗಳಿಗೆ ನೀರು ಪೂರೈಕೆಯಾಗುವ ವ್ಯವಸ್ಥೆಯೊಂದನ್ನು ರೂಪಿಸಿ ಯೋಜನೆಯ ನೀಲನಕ್ಷೆ ಸಿದ್ಧಗೊಳಿಸಿದೆ. ಈ ಯೋಜನೆಯ ಅನ್ವಯ ಮಲಪ್ರಭಾ ಅಣೆಕಟ್ಟೆ ಯಿಂದಲೇ (ರೇಣುಕಾ ಸಾಗರ) ನೀರು ಹರಿಸಬೇಕಾಗಿತ್ತು. ಆದರೆ ಅಣೆಕಟ್ಟೆಗೆ ನೀರಿನ ಸಂಗ್ರಹ ಕುಸಿದಿದ್ದರಿಂದ ಯೋಜನೆ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಮಹದಾಯಿ ನ್ಯಾಯಾಧಿಕರಣ ಕುಡಿಯುವುದಕ್ಕಾಗಿಯೇ 4 ಟಿಎಂಸಿ ನೀರು ಕೊಟ್ಟಿದ್ದರಿಂದ ಯೋಜನೆ ಅನುಷ್ಠಾನಕ್ಕೆ ಎದುರಾಗಿದ್ದ ಅತಿ ದೊಡ್ಡ ವಿಘ್ನ ದೂರಾದಂತಾಗಿದೆ.

ಯೋಜನೆ ರೂಪಿಸಿದ್ದು ಏಕೆ?
ಧಾರವಾಡ ಜಿಲ್ಲೆಗೆ ಯಾವುದೇ ಪ್ರಬಲವಾದ ನದಿ, ಹಳ್ಳಕೊಳ್ಳ ಅಥವಾ ಕೆರೆಗಳ ಬಲವಿಲ್ಲ. ಇಲ್ಲೇನಿದ್ದರೂ ಅಂತರ್ಜಲದ ಜೊತೆಗೆ ಹಳ್ಳಿಗರು ತಮ್ಮ ದಾಹ ನೀಗಿಸಿಕೊಳ್ಳಬೇಕು. ಜಿಲ್ಲೆಯಲ್ಲಿನ 388 ಹಳ್ಳಿಗಳಲ್ಲಿ 11 ಲಕ್ಷಕ್ಕೂ ಅಧಿಕ ಜನರು ವಾಸವಾಗಿದ್ದು 8 ಲಕ್ಷದಷ್ಟು ಜಾನುವಾರುಗಳಿವೆ. ಪ್ರತಿ ಬೇಸಿಗೆಯಲ್ಲೂ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಇಂದಿಗೂ ಕುಂದಗೋಳ, ಹುಬ್ಬಳ್ಳಿ, ನವಲಗುಂದ ತಾಲೂಕಿನ ಕೆಲವು ಹಳ್ಳಿಗಳಿಗೆ ಪ್ರತಿದಿನ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವುದು ತಪ್ಪಿಲ್ಲ. 2018ರ ಜನವರಿಯಿಂದ ಜುಲೈವರೆಗೂ ಜಿಲ್ಲೆಯ ಹಳ್ಳಿಗಳಲ್ಲಿತ್ತು ನೀರಿನ ಹಾಹಾಕಾರ. 

ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆದು ತಾತ್ಕಾಲಿಕವಾಗಿ ನೀರು ಪೂರೈಕೆ ಮಾಡುತ್ತದೆ. ಆದರೆ ಸತತ ಬರಗಾಲ ಮತ್ತು ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಿದ್ದರಿಂದಾಗಿ ಕಳೆದ ಆರು ವರ್ಷಗಳಲ್ಲಿ ಅಂತರ್ಜಲ 500 ಅಡಿಗೆ ಕುಸಿದಿದೆ. ಸರ್ಕಾರಿ ಜಾಗದಲ್ಲಿಯೇ ಗ್ರಾಮೀಣ ನೀರು ಪೂರೈಕೆ ಇಲಾಖೆ ಬೊರ್‌ ವೆಲ್‌ ಕೊರೆಸಬೇಕು. ಎರಡು ಅಥವಾ ಮೂರು ತಿಂಗಳು ನೀರು ಚೆಲ್ಲಿ ಕೊಳವೆಬಾವಿ ಬತ್ತುತ್ತಿವೆ. ಇನ್ನು ಕೆರೆಗಳ್ಳೋ ಹತ್ತು ವರ್ಷಕ್ಕೆ ಒಮ್ಮೆ ಮಳೆಯಿಂದ ಭರ್ತಿಯಾಗುತ್ತಿವೆ. ಅಲ್ಲಿಯೂ ನೀರಿಲ್ಲ. ಒಟ್ಟಾರೆ ಕುಡಿಯುವ ನೀರಿಗಾಗಿ ಜಿಲ್ಲೆಗೆ ಪ್ರತಿವರ್ಷ 15-20 ಕೋಟಿ ರೂ.ಗಳಷ್ಟು ಹಣ ವ್ಯಯಿಸಲಾಗುತ್ತಿದೆ. ಹೀಗಾಗಿ ಶಾಶ್ವತವಾಗಿ ಸವದತ್ತಿಯ (ಬೆಳಗಾವಿ ಜಿಲ್ಲೆ)ಯ ರೇಣುಕಾ ಸಾಗರ್‌ ಜಲಾಶಯದಿಂದ 1.6 ಟಿಎಂಸಿ ನೀರನ್ನು ಬಳಸಿಕೊಂಡು ಜಿಲ್ಲೆಯ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು ಎಂಬ ಕಾರಣಕ್ಕೆ ಈ ಯೋಜನೆ ರೂಪಿತವಾಗಿದೆ.

ನೀರು ಪೂರೈಕೆಗೆ ಜಾಲ
ಜಿಲ್ಲೆಯ 388 ಹಳ್ಳಿಗಳಲ್ಲಿಯೂ ಪ್ರತಿವರ್ಷ ನೀರಿನ ತೊಂದರೆ ಇದ್ದೇ ಇದೆ. ಈ ಪೈಕಿ 279 ಹಳ್ಳಿಗಳಲ್ಲಂತೂ ವರ್ಷದ 6 ತಿಂಗಳು ನೀರಿಗಾಗಿ ಹಾಹಾಕಾರ ಇರುವುದನ್ನು ಅಧ್ಯಯನ ತಂಡ ಪ್ರಸ್ತಾಪಿಸಿದೆ. ಅದಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ ಎರಡು ಕಡೆ ಮಾಡಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಮಾದರಿಯಲ್ಲೇ ಇನ್ನಷ್ಟು ತಂತ್ರಾಂಶಗಳು ಮತ್ತು ವಿನೂತನ ವಿಧಾನಗಳನ್ನು ಬಳಸಿಕೊಂಡು ಸರಿಯಾಗಿ ನೀರು ಪೂರೈಸಲು ಯೋಜಿಸಲಾಗಿದೆ.

Advertisement

ಮಲಪ್ರಭಾ ಅಣೆಕಟ್ಟೆಯಿಂದ ನೇರವಾಗಿ ಪ್ರತ್ಯೇಕ ಪೈಪ್‌ಲೈನ್‌ ಬಳಸಿಕೊಂಡು ನೀರು ಪೂರೈಕೆ ಜಾಲವನ್ನು ಹೆಣೆಯಲಾಗಿದೆ. ಮೊದಲು ನೀರು ಮೇಲ್ಮಟ್ಟದ ಜಲಾಗಾರಗಳಿಗೆ (ದೈತ್ಯ ಓವರ್‌ಹೆಡ್‌ ಟ್ಯಾಂಕ್‌) ಪೂರೈಕೆಯಾಗಲಿದೆ. ಅಲ್ಲಿಂದ ಆಯಾ ಹಳ್ಳಿಗಳ ಸಣ್ಣ ಟ್ಯಾಂಕ್‌ ಗಳಿಗೆ ಪೂರೈಕೆಯಾಗಿ ಮನೆಮನೆ ತಲುಪಲಿದೆ. ಪ್ರತಿ ನಾಲ್ಕು ಅಥವಾ ಐದು ಹಳ್ಳಿಗಳಿಗೆ ಒಂದೊಂದು ಪ್ರತ್ಯೇಕ ನೀರು ಪೂರೈಕೆ ಪಂಪ್‌ ಗಳು ಇರಲಿವೆ. ಒಂದೆಡೆ ವಿದ್ಯುತ್‌ ವ್ಯತ್ಯಯವಾದರೆ ಎಲ್ಲ ಹಳ್ಳಿಗಳಿಗೂ ತೊಂದರೆಯಾಗದಂತೆ ಪ್ರತ್ಯೇಕ ವಿದ್ಯುತ್‌ ಲೈನ್‌ ಮತ್ತು ಪಂಪ್‌ ಸೆಟ್‌ಗಳನ್ನು ಬಳಕೆ ಮಾಡಲು ಯೋಜಿಸಲಾಗಿದೆ.

ಧಾರವಾಡ ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇದ್ದಿದ್ದು ನಿಜ. ಪ್ರತಿ ಬಾರಿಯೂ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿದ್ದೇವೆ ಅಷ್ಟೇ. ಆದರೆ ಈ ಸಮಗ್ರ ಯೋಜನೆ ಜಾರಿಯಾದರೆ, ಶಾಶ್ವತವಾಗಿ ಕುಡಿಯುವ ನೀರು ಸಿಗಲಿದೆ.
ಮನೋಹರ ಮಂಡೋಳಿ, ಪಂಚಾಯತ್‌ರಾಜ್‌ ಇಲಾಖೆ ಇಇ, ಧಾರವಾಡ

ಜಿಲ್ಲೆಗೆ ಯಾವುದೇ ನದಿಗಳ ಆಸರೆ ಇಲ್ಲ. ಹೀಗಾಗಿ ಈ ಬೃಹತ್‌ ಯೋಜನೆ ಅನಿವಾರ್ಯವಾಗಿದೆ. ಈ ಕುರಿತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಮನವರಿಕೆ ಮಾಡಲಾಗಿದೆ. ಪಂಚಾಯತ್‌ ರಾಜ್‌ ಇಲಾಖೆ ಮೂಲಕ ಅಗತ್ಯ ಕ್ರಮಗಳಿಗೂ ಸೂಚಿಸಿದ್ದೇನೆ.
ದೀಪಾ ಚೋಳನ್‌, ಜಿಲ್ಲಾಧಿಕಾರಿ, ಧಾರವಾಡ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next