Advertisement

ಮಲಪ್ರಭಾ ನದಿ ಒತ್ತುವರಿ ವಿಚಾರವನ್ನು ವಿಧಾನಸಭೆ ಕಲಾಪದಲ್ಲಿ ಚರ್ಚಿಸುವೆ : ಸಿದ್ದರಾಮಯ್ಯ

03:22 PM Sep 15, 2020 | sudhir |

ಬಾಗಲಕೋಟೆ: ಮಲಪ್ರಭಾ ನದಿ ಒತ್ತುವರಿಯಾಗಿದೆ. ಈ ಕುರಿತು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಜತೆಗೆ ಚರ್ಚೆ ಮಾಡುತ್ತೇನೆ. ಸೆ. 21ರಿಂದ ಆರಂಭಗೊಳ್ಳಲಿರುವ ವಿಧಾನಸಭೆ ಕಲಾಪದಲ್ಲೂ ಪ್ರಸ್ತಾಪಿಸುವೆ ಎಂದು ಬಾದಾಮಿ ಶಾಸಕರೂ ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಬಾದಾಮಿ ಕ್ಷೇತ್ರದ ಗೋವಿನಕೊಪ್ಪ ಬಳಿ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಹಳೆಯ ಸೇತುವೆ ಹಾನಿಯಾದ
ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಲಪ್ರಭಾ ನದಿ ಪ್ರವಾಹದಿಂದ 22.44 ಕೋಟಿ ಮೊತ್ತದ 3600 ಹೆಕ್ಟೇರ್‌ ಬೆಳೆ ಬಾದಾಮಿ ಕ್ಷೇತ್ರದಲ್ಲಿ ಹಾನಿಯಾಗಿದೆ. ಅಧಿವೇಶನದಲ್ಲಿ ರಾಜ್ಯ ಹಾಗೂ ಬಾದಾಮಿಯ ನೆರೆ ಹಾವಳಿ ಕುರಿತು ಮಾತಾಡುತ್ತೇನೆ. ಕಳೆದ ಬಾರಿಯೂ ನೆರೆ ಪರಿಹಾರ
ಸರಿಯಾಗಿ ಕೊಟ್ಟಿಲ್ಲ. ಗೋವಿನಕೊಪ್ಪ ಹಳೆಯ ಸೇತುವೆ ದುರಸ್ತಿ ಮಾಡಿ, ಎತ್ತರಿಸುವಂತೆ ಕಳೆದ ಬಾರಿಯೇ ಒತ್ತಾಯ ಮಾಡಿದ್ದೆ.
ಒಂದು ವರ್ಷವಾದರೂ ಮಾಡಿಲ್ಲ. ಪ್ರವಾಹದ ಬಗ್ಗೆ ಕಳೆದ ಬಾರಿ 3ರಿಂದ 4 ಗಂಟೆ ಮಾತನಾಡಿದ್ದೆ. ರಾಜ್ಯದಲ್ಲಿ ಈ ವರ್ಷ 8871
ಕೋಟಿ ಹಾನಿಯಾಗಿದೆ ಎಂದು ಸರ್ಕಾರ ಹೇಳಿದೆ. ಈ ವರೆಗೂ ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲಿ ಒಂದು ರೂಪಾಯಿ
ಪರಿಹಾರ ಕೊಟ್ಟಿಲ್ಲ ಎಂದರು.

ಮುಂದಿನ ವಾರ ಅಧಿವೇಶನ ಶುರುವಾಗಲಿದ್ದು, ಈ ಕುರಿತು ಸವಿಸ್ತಾರವಾಗಿ ಮಾತನಾಡುವೆ. ಸೇತುವೆ, ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡಲು ಒತ್ತಾಯಿಸುವೆ ಎಂದು ತಿಳಿಸಿದರು. ನದಿ ಒತ್ತುವರಿಯೂ ಚರ್ಚೆ: ಮಲಪ್ರಭಾ ನದಿಯನ್ನು ಬಹಳ ಜನ ಒತ್ತುವರಿ ಮಾಡಿದ್ದಾರೆ. ನದಿ ಪಾತ್ರವನ್ನು ತೆರವು ಮಾಡಬೇಕೆಂಬ ಒತ್ತಾಯವಿದೆ. ನದಿ ಒತ್ತುವರಿಯಾದರೆ ಪದೇ ಪದೇ ಪ್ರವಾಹ ಬರುತ್ತದೆ. ಈ ಕುರಿತೂ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವರಾದ ಎಚ್‌.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಕಾಂಗ್ರೆಸ್‌ ಮುಖಂಡರಾದ ಹೊಳಬಸು ಶೆಟ್ಟರ, ಮಹೇಶ ಹೊಸಗೌಡರ, ಎಂ.ಬಿ. ಹಂಗರಗಿ, ಸಣ್ಣಬೀರಪ್ಪ ಪೂಜಾರ, ವೆಂಕಣ್ಣ ಹೊರಕೇರಿ, ಹನಮಂತ ನರಗುಂದ, ಬಸು ಕಟ್ಟಿಕಾರ, ಶೇಖಪ್ಪ ಪವಾಡಿನಾಯ್ಕರ, ಶಿವಾನಂದ ಚೋಳನ್ನವರ, ಬಸಪ್ಪ ಧರೆಗೌಡ್ರ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ತಹಶೀಲ್ದಾರ್‌ ಸುಹಾಸ ಇಂಗಳೆ, ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ಪ್ರಕಾಶ ಬಣಕಾರ ಉಪಸ್ಥಿತರಿದ್ದರು.

Advertisement

ಆಶ್ರಯ ಕಾಲೋನಿ ರಸ್ತೆಗೆ ರೈತನ ಭೂಮಿ: ಸಿದ್ದ ರಾಮಯ್ಯ ನೆರವು ಬಾದಾಮಿ ತಾಲೂಕಿನ ಮಲಪ್ರಭಾ ನದಿ ದಡದ ತಳಕವಾಡ ಗ್ರಾಮದಲ್ಲಿ ಆಶ್ರಯ ಕಾಲೋನಿಗೆ ತೆರಳಲು ಸಾರ್ವಜನಿಕರ ಅನುಕೂಲಕ್ಕಾಗಿ ತನ್ನ ಭೂಮಿಯನ್ನೇ ರಸ್ತೆ ನಿರ್ಮಾಣಕ್ಕೆ ನೀಡಿದ ರೈತನಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ವೈಯಕ್ತಿಕ ನೆರವು ನೀಡುವ ಮೂಲಕ ರೈತನ ಕಾರ್ಯಕ್ಕೆ
ಮೆಚ್ಚುಗೆ ವ್ಯಕ್ತಪಡಿಸಿದರು. ತಳಕವಾಡದ ವೀರಯ್ಯ ಮೂಗನೂರ ಕುಟುಂಬದವರು, ಆಶ್ರಯ ಕಾಲೋನಿಗೆ ತೆರಳಲು ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ್ದು, ಅವರ ಕುಟುಂಬಕ್ಕೆ ಸಿದ್ದರಾಮಯ್ಯ ವೈಯಕ್ತಿಕ 1 ಲಕ್ಷ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next