ಬಾಗಲಕೋಟೆ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ರೈತನೋರ್ವ ಮಲಪ್ರಭಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಬಾದಾಮಿ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಮೃತಪಟ್ಟ ರೈತನನ್ನು ರಾಮಪ್ಪ ಮಲ್ಲಪ್ಪ ಹೊನ್ನನವರ (52) ಎಂದು ಗುರುತಿಸಲಾಗಿದೆ.
ರಾಮಪ್ಪ ಬೆಳಗ್ಗೆ ಗ್ರಾಮದಿಂದ ಹೊಲಕ್ಕೆ ಹೊರಟಿದ್ದರು. ಈ ವೇಳೆ ನದಿ ಪಕ್ಕದಲ್ಲಿರುವ ದೇವಸ್ಥಾನಕ್ಕೆ ಹೋಗಿ, ತನ್ನ ಹೊಲಕ್ಕೆ ಹೋಗುವುದು ರೂಢಿ. ಮಂಗಳವಾರವೂ ದೇವಸ್ಥಾನಕ್ಕೆ ಹೋಗಿ, ತೋಟಕ್ಕೆ ಹೊರಟಿದ್ದರು. ಈ ವೇಳೆ ರಭಸವಾಗಿ ಹರಿಯುತ್ತಿದ್ದ ನದಿಯ ನೀರಿನ ಒತ್ತಡಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು.
ಗ್ರಾಮಸ್ಥರು, ಅಗ್ನಿ ಶಾಮಕ ಸಿಬ್ಬಂದಿ ರಾಮಪ್ಪನ ಹುಡಕಾಟ ನಡೆಸಿದ್ದರು. ಆದರೆ, ಶಿರಬಡಗಿ ಗ್ರಾಮದಿಂದ ಸ್ವಲ್ಪ ದೂರದ ಕಬ್ಬಿನ ಗದ್ದೆಯಲ್ಲಿ ರೈತ ರಾಮಪ್ಪನ ಶವ ದೊರೆತಿದೆ.
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಪ್ರವಾಹ ಎದುರಾಗಿದ್ದು, ಶಿರಬಡಗಿಯ ರೈತ ರಾಮಪ್ಪ ಸೇರಿದಂತೆ, ಈ ವರೆಗೆ ಪ್ರವಾಹದಿಂದ ಒಟ್ಟು ಏಳು ಜನ ಮೃತಪಟ್ಟಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ: ರಾಮಪ್ಪ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಶಿರಬಡಗಿ ಗ್ರಾಮಸ್ಥರೂ ಸಹಿತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಲಕ್ಕ ಹೋಗಿ ಬರ್ತಿನಿ ಎಂದು ಹೇಳಿ ಹೋಗಿ, ಹೆಣಾ ಆದೆಲ್ಲೋ ಎಂದು ರಾಮಪ್ಪನ ಕುಟುಂಬದವರು ಗೋಳಿಡುತ್ತಿದ್ದರು.